ಸಾರಾಂಶ
ಯುವತಿ ತಾನು ಪ್ರೀತಿಸುವ ಪ್ರೇಮಿಯೊಂದಿಗೆ ಬಾಳುತ್ತೇನೆ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾಳೆ.
ರಾಘು ಕಾಕರಮಠಅಂಕೋಲಾ: ತಮ್ಮ ವಿವಾಹಕ್ಕೆ ಎದುರಾದ ಭಿನ್ನ ಧರ್ಮಗಳ ತಡೆಗೋಡೆ, ಪೋಷಕರ ವಿರೋಧದ ಅಡ್ಡಿ ಎಲ್ಲವನ್ನೂ ದಾಟಿದ ಜೋಡಿಯೊಂದು ವಿವಾಹ ಬಂಧನಕ್ಕೆ ಒಳಗಾಗುವ ಮೂಲಕ ಬಾಳ ಬಂಡಿಯ ಪಯಣಕೆ ಮುಂದಡಿ ಇಟ್ಟಿದೆ. ಅಂಕೋಲಾ ತಾಲೂಕು ಕೇಂದ್ರದಿಂದ ೩೦ ಕಿಮೀ ಅಂತರದಲ್ಲಿರುವ ಯುವಕನಿಗೆ, ಸಮುದ್ರ ತಡಿಯಂಚಿನ ಯುವತಿಯೊಬ್ಬರು ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿ ಪರಿಚಿತವಾಗಿದ್ದರು. ಬರುಬರುತ್ತಲೆ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಂಡು ಪ್ರೀತಿಯ ಬಲೆಗೆ ಬಿದ್ದರು. ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಸಂದೇಶ ವಿನಿಮಯ ಮಾಡಿಕೊಳ್ಳುತ್ತಾ 3 ವರ್ಷ ಕಳೆದಿದ್ದರು.
ಧರ್ಮದ ಗೋಡೆ ಅಡ್ಡಿ: ಈ ಪ್ರೀತಿಗೆ ಯುವಕನ ಮನೆಯಲ್ಲಿ ಅಷ್ಟಾಗಿ ವಿರೋಧ ಇರಲಿಲ್ಲ. ಆದರೆ ಯುವತಿಯ ಮನೆಯಲ್ಲಿ ಈ ಪ್ರೀತಿಗೆ ಒಪ್ಪಿಗೆ ಇರಲಿಲ್ಲ. ಏನಾದರೂ ಮಾಡಿ ತಮ್ಮ ಪ್ರೀತಿಗೆ ದಾಂಪತ್ಯ ಸಮರಸ ಬೆಸುಗೆಯನ್ನು ಬೆಸೆಯಲು ಈ ಯುವ ಜೋಡಿ ಮುಂದಾಗಿದ್ದರು. ಈ ವಿಷಯವನ್ನು ತಿಳಿದ ಯುವತಿಯ ಮನೆಯವರು ಯುವತಿಯನ್ನು ಮನೆಯಲ್ಲಿಯೆ ದಿಗ್ಬಂಧನಕ್ಕೆ ಒಳಪಡಿಸಿ, ಮೊಬೈಲ್ ಕಿತ್ತುಕೊಂಡು ೩ ತಿಂಗಳ ಕಾಲ ಯುವಕನ ಸಂಪರ್ಕಕ್ಕೆ ಬರದಂತೆ ನೋಡಿಕೊಂಡಿದ್ದರು.ಠಾಣೆಗೆ ಆಗಮಿಸಿದ ಪ್ರೇಮಿ: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮನೆಯವರು ಮನೆಯಲ್ಲಿ ಕೂಡಿ ಹಾಕಿದ್ದಾರೆ. ಅವಳನ್ನು ನನ್ನದೊಂದಿಗೆ ಜೀವನ ಮಾಡಲು ಅವಕಾಶ ಮಾಡಿಕೊಡಿ ಎಂದು ಯುವಕ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದ. ಯುವಕನ ದೂರಿನ ಮೇರೆಗೆ ಯುವತಿಯ ಮನೆಯವರನ್ನು ಠಾಣೆಗೆ ಕರೆದು ಪೊಲೀಸರು ವಿಚಾರಿಸಿದ್ದಾರೆ. ಈ ವೇಳೆ ಯುವತಿ ತಾನು ಪ್ರೀತಿಸುವ ಪ್ರೇಮಿಯೊಂದಿಗೆ ಬಾಳುತ್ತೇನೆ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ಹಿಂದು ಪದ್ಧತಿಯಂತೆ ವಿವಾಹ: ಭಿನ್ನ ಧರ್ಮಗಳ ತಡೆಗೋಡೆಯಿಂದ ಬೇರೆ ಆದ ಪ್ರೇಮಿಗಳು ಹಿಂದು ಧಾರ್ಮಿಕ ಪದ್ಧತಿಯಂತೆ ಸಪ್ತಪದಿ ತುಳಿದು ನವಜೀವನಕ್ಕೆ ಕಾಲಿಟ್ಟು ಒಂದಾದರು. ಕುರುಡು ಪ್ರೀತಿಗೆ ಧರ್ಮದ ಹಂಗು ಕಾಣದೆ ಯುವಕ- ಯುವತಿ ಜೊತೆಯಾಗಿ ಕೈ ಹಿಡಿದು ಹುಡುಗನ ಮನೆಯತ್ತ ಹೆಜ್ಜೆ ಹಾಕಿ ಗಮನ ಸೆಳೆದರು.