ಲಿಂಗಾಯತ ಧರ್ಮದಲ್ಲಿ ತತ್ವ, ನಿಷ್ಠೆ ಮುಖ್ಯ

| Published : Mar 02 2025, 01:19 AM IST

ಸಾರಾಂಶ

ಸಾಣೇಹಳ್ಳಿಯ ಗುರು ಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.

ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರದಲ್ಲಿ ಸಾಣೇಹಳ್ಳಿ ಶ್ರೀ ಕನ್ನಡಪ್ರಭ ವಾರ್ತೆ ಹೊಸದುರ್ಗ

ಸಾಂಸ್ಕೃತಿಕತೆಯಲ್ಲಿ ಕಲೆ, ಸಾಹಿತ್ಯ, ಶಿಕ್ಷಣ ಇವೆಲ್ಲವುಗಳನ್ನು ಒಳಗೊಂಡಿದ್ದು ಲಿಂಗಾಯತ ಎಂದು ಸಾಣೇಹಳ್ಳಿ ಪಂಡಿತರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಲಿಂಗಾಯತ ಎನ್ನುವುದು ಹುಟ್ಟಿನಿಂದ ಬರುವಂಥದ್ದಲ್ಲ. ಅರಿವು ಆಚಾರದಿಂದ ಬರುವಂಥದ್ದು. ಲಿಂಗಾಯತ ಧರ್ಮದಲ್ಲಿ ತತ್ವ, ನಿಷ್ಠೆ, ಬದ್ದತೆ ಮುಖ್ಯ. ಗುರುವಾದವರು ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳ ಬಗ್ಗೆ ಅರಿವನ್ನು ಮೂಡಿಸಿ ಜಾಗೃತಗೊಳಿಸಬೇಕು ಎಂದರು.

ಲಿಂಗದೀಕ್ಷೆ ಸಂಸ್ಕಾರ ಪಡೆದಂತಹ ಮನುಷ್ಯ ಭೂತ ಹಾಗೂ ಭವಿಷ್ಯದ ಬಗ್ಗೆ ಚಿಂತಿಸದೇ ವರ್ತಮಾನದಲ್ಲಿ ಸಂಸ್ಕಾರವಂತನಾಗಿ ಬದುಕಬೇಕು ಎನ್ನುವ ಸಂಕಲ್ಪ ಮಾಡಿಕೊಳ್ಳಬೇಕು. ದೀಕ್ಷೆ ಎಂದರೆ ಕೂಡುವುದು ಕಳೆಯುವುದು. ದೇವರ ಬಗ್ಗೆ ಇದ್ದ ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನ ಪಡೆದುಕೊಳ್ಳಬೇಕು. ನಂತರ ನಿಷ್ಠೆ ಬದ್ದತೆಯಿಂದ ಬದುಕುವುದೇ ದೀಕ್ಷೆ ಎಂದು ಹೇಳಿದರು.

ದೇವರು ಸರ್ವಾಂತರ್ಯಾಮಿ ಗಾಳಿ, ಬೆಳಕು, ಪ್ರಕೃತಿಯ ಸುತ್ತಲೂ ದೇವರಿದ್ದಾನೆ. ಆದರೆ ದೇವರ ಹೆಸರಿನಲ್ಲಿ ಪೂಜಾರಿ ಪುರೋಹಿತರು ಗುಡಿಯಲ್ಲಿ ದೇವರನ್ನ ಕೂರಿಸಿ ಭಯವನ್ನು ಹುಟ್ಟಿಸುತ್ತಿದ್ದಾರೆ. ದೇವಸ್ಥಾನದಲ್ಲಿ ನಡೆಯುವ ಕುತಂತ್ರಗಳನ್ನು ನೋಡಿಯೇ ಬಸವಣ್ಣ ದೇಹವನ್ನೇ ದೇವಾಲಯ ಮಾಡಿಕೊಂಡರು. ದೇಹಾಲಯದ ಮೂಲಕ ಜಂಗಮತ್ವವನ್ನು ಸಾರಿ ಜೀವಂತಿಕೆಯನ್ನು ಕಲ್ಪನೆ ಕೊಟ್ಟರು ಎಂದರು.

ಲಿಂಗಾಯತ ಧರ್ಮ ಅಪರೂಪದ ಧರ್ಮ. ಬೇರೆ ಬೇರೆ ಧರ್ಮದಲ್ಲಿ ದೇವರನ್ನು ಕೈಮುಟ್ಟಿ ಪೂಜಿಸುವುದಕ್ಕೆ ಅವಕಾಶವಿಲ್ಲ. ಆದರೆ ಲಿಂಗಾಯತ ಧರ್ಮದಲ್ಲಿ ಕೈಮುಟ್ಟಿ ಪೂಜಿಸುವ ಅವಕಾಶ ಇದೆ. ಮನುಷ್ಯನಿಗೆ ಜಾತಿಗಿಂತ ನೀತಿ ಮುಖ್ಯ. ಧರ್ಮ ಕೂಡಿಸುವ ಕೆಲಸ ಮಾಡಿದರೆ ಜಾತಿ ಕತ್ತರಿಸುವ ಕೆಲಸ ಮಾಡುತ್ತದೆ ಎಂದರು.

ಇಷ್ಟಲಿಂಗ ದೀಕ್ಷೆ ಪಡೆದುಕೊಂಡನು ಸದಾಚಾರಿಯಾಗಿರಬೇಕು. ಜಾತಿಭೇದವನ್ನು ಮಾಡದೇ ನಾವೆಲ್ಲರೂ ಶಿವನ ಮಕ್ಕಳು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಗುಣ ಬೆಳೆಸಿಕೊಳ್ಳಬೇಕು. ವಿವೇಕಶೀಲರಾಗಿ ವಿನಯವಂತರಾಗಿ ಬದುಕಬೇಕೆಂದರು. ಸಂಗೀತ ಶಿಕ್ಷಕ ನಾಗರಾಜ್ ಹೆಚ್ ಎಸ್ ವಚನಗಳನ್ನು ಹೇಳಿಕೊಟ್ಟರು‌. ಸಿರಿಮಠ ಹಾಗೂ ಧನಂಜಯ ದೀಕ್ಷಾ ಕಾರ್ಯವನ್ನು ಸಿದ್ಧತೆ ಮಾಡಿದರು.