ರಾಮನಗರ: ಕರ್ನಾಟಕದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೌನ ವಹಿಸಿರುವುದು ಖಂಡನೀಯ. ಆಡಳಿತ ಪಕ್ಷ ಕೇಂದ್ರ ದತ್ತ ಬೊಟ್ಟು ಮಾಡಿದರೆ, ವಿರೋಧ ಪಕ್ಷಗಳಿಗೆ ಉಸಿರಿಲ್ಲದಂತಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.
ನಗರದ ಐಜೂರು ವೃತ್ತದಲ್ಲಿ ಶನಿವಾರ ಯುದ್ಧ ಬೇಡವೇ ಬೇಡ, ಎಲ್‌ಪಿಜಿ ಗ್ಯಾಸ್, ಸಿಲಿಂಡರ್‌ಗಳನ್ನು ಕೊಡಿ ಎಂದು ಘೋಷಣೆಗಳನ್ನು ಕೂಗಿ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟಿಸಿದ ವಾಟಾಳ್ ನಾಗರಾಜ್ , ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ದದಿಂದ ಜನ ಸಾಮಾನ್ಯರಲ್ಲಿ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕವಷ್ಟೆ ಅಲ್ಲದೆ ಎಲ್ಲೆಡೆ ಪ್ರಾಣ ಬಿಡುವ ಪರಿಸ್ಥಿತಿ ಎದುರಾಗಿದ್ದು, ಇದೇ ರೀತಿಯ ವಾತಾವರಣ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನರಿಗೆ ಆಹಾರವೇ ಸಿಗುವುದಿಲ್ಲ ಎಂದು ಎಚ್ಚರಿಸಿದರು.ರಾಜಕೀಯ ಪಕ್ಷಗಳಿಗೆ ಜನರ ಕಷ್ಟಗಳಿಗಿಂತ ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಗಳೇ ಮುಖ್ಯ ಎನ್ನುವಂತಾಗಿದೆ. ಬಿಜೆಪಿಯವರು ಒಂದಲ್ಲಾ ಒಂದು ವಿಷಯಕ್ಕೆ ಬಾಯಿ ತೆಗೆಯುತ್ತಿದ್ದರು, ಯಡಿಯೂರಪ್ಪ ಮತ್ತು ಅವರ ಮಗ ಗಲಾಟೆ ಮಾಡುತ್ತಿಲ್ಲ. ಅವರೆಲ್ಲರ ಗಂಭೀರವಾದ ಸಮಸ್ಯೆ ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.
ಆಟೋ ಚಾಲಕರಿಗೆ ಹೊಟ್ಟೆ, ಬಟ್ಟೆಗಾಗಿ ದಿನನಿತ್ಯ ಹಣ ಸಿಗುತ್ತಿಲ್ಲ. ಬೆಂಗಳೂರಿನ ಎಲ್ಲ ರಸ್ತೆಗಳಲ್ಲಿ ಎಲ್‌ಪಿಜಿ ಸಿಗದೆ ರಿಕ್ಷಾಗಳು ಸರದಿಯಲ್ಲಿ ನಿಂತಿವೆ. ಕೂಡಲೇ ಸರ್ಕಾರ ಆಟೋ ಚಾಲಕರಿಗೆ ತಿಂಗಳಿಗೆ ಕನಿಷ್ಟ 10 ಸಾವಿರ ನಗದು ನೀಡಬೇಕು. ಇಲ್ಲವಾದಲ್ಲಿ ಅವರ ಪರ ನಿಂತು ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಇಂದು ಪ್ರಪಂಚದ ಶಾಂತಿ ಮತ್ತು ನೆಮ್ಮದಿಗೆ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಸತ್ಯಾಗ್ರಹ, ಪ್ರಾಮಾಣಿಕತೆ, ಅಹಿಂಸೆಯ ಸಂದೇಶಗಳು ಎಲ್ಲರಿಗೂ ಬೇಕಾಗಿದೆ. ಇದೇ ಸೋಮವಾರ ಸಂಜೆ ಬೆಂಗಳೂರು ನಗರದಲ್ಲಿ ಯುದ್ದ ಬೇಡ, ಗಾಂಧೀಜಿ ಅವರ ತತ್ವ ಸಿದ್ದಾಂತ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು, ರಾಜ್ಯ ಉಸ್ತುವಾರಿ ಅಧ್ಯಕ್ಷ ಗಂಗಾಧರ್ ವಿ.ಎನ್, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ದಲಿತ ಘಟಕದ ಜಿಲ್ಲಾಧ್ಯಕ್ಷ ಕೆ.ಜಯರಾಮು, ತಾಲೂಕು ಉಪಾಧ್ಯಕ್ಷ ಸಿ.ಎಂ ವಿಜಯಕುಮಾರ್, ತಾಲೂಕು ಕಾರ್ಯಾಧ್ಯಕ್ಷ ಕರುನಾಡ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಆರ್.ವಿ. ಕುಮಾರ್,ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.
4ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಐಜೂರು ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು.