ಲೂಸಿ ಸಾಲ್ಡಾನಾ ಬದುಕು ಮಾದರಿ: ವಿಧಾನ ಪರಿಷತ್‌ ಸದಸ್ಯ ಸಂಕನೂರ

| Published : Dec 16 2024, 12:46 AM IST

ಸಾರಾಂಶ

ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನಾ ಅವರು 112 ಶಾಲೆಗಳಿಗೆ ಭೇಟಿ ನೀಡಿ ₹ 80 ಲಕ್ಷ ದತ್ತಿ ನೀಡಿದ್ದು ಸಮಾಜದಲ್ಲಿನ ಶೈಕ್ಷಣಿಕ ಕ್ಷೇತ್ರಕ್ಕೆ ಇದು ಉತ್ತಮ ಕೊಡುಗೆ. ಇದು ಶಿಕ್ಷಣದ ಮೇಲಿನ ನಿಜವಾದ ಕಾಳಜಿ ತೋರುತ್ತದೆ.

ಧಾರವಾಡ:

ಒಂದು ದೇಶ ಅಭಿವೃದ್ಧಿ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ. ಅಂತಹ ಶಿಕ್ಷಣ ರಂಗಕ್ಕೆ ತಮ್ಮ ದುಡಿತದ ಬಹುತೇಕ ಭಾಗವನ್ನು ದಾನವಾಗಿ ನೀಡುತ್ತಿರುವ ಲೂಸಿ ಸಾಲ್ಡಾನಾ ಕಾರ್ಯ ಶ್ಲಾಘನೀಯ. ಅವರ ಬದುಕು ಕುರಿತು ಕೃತಿ ಮಾತ್ರವಲ್ಲದೇ ಚಲನಚಿತ್ರ ತೆಗೆದಿರುವುದು ಮಾದರಿ ಕಾರ್ಯ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

ನವರಸ ಸ್ನೇಹಿತರ ವೇದಿಕೆ, ಅಕ್ಷರತಾಯಿ ಸಾಲ್ಡಾನಾ ಸೇವಾ ಸಂಸ್ಥೆಯು ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಲೂಸಿ ಸಾಲ್ಡಾನಾ ಜೀವನಾಧಾರಿತ ಬದುಕು ಬಂಡಿ ಚಲನಚಿತ್ರ ಬಿಡುಗಡೆಯಲ್ಲಿ ಅವರು ಮಾತನಾಡಿ, ಸಾಲ್ಡಾನಾ ಆದರ್ಶ ಶಿಕ್ಷಕಿ ಮಾತ್ರವಲ್ಲ, ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ ಬದುಕಿನ ಬಗ್ಗೆ ಸಿನಿಮಾ ಮಾಡಿದ್ದು ಮತ್ತೊಬ್ಬರಿಗೆ ಪ್ರೇರಣೆಯಾಗಲಿ ಎಂದರು.

ಬದುಕು ಬಂಡಿ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ವಿಪ ಸಭಾಪತಿ ಬಸವರಾಜ ಹೊರಟ್ಟಿ, ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನಾ ಅವರು 112 ಶಾಲೆಗಳಿಗೆ ಭೇಟಿ ನೀಡಿ ₹ 80 ಲಕ್ಷ ದತ್ತಿ ನೀಡಿದ್ದು ಸಮಾಜದಲ್ಲಿನ ಶೈಕ್ಷಣಿಕ ಕ್ಷೇತ್ರಕ್ಕೆ ಇದು ಉತ್ತಮ ಕೊಡುಗೆ. ಇದು ಶಿಕ್ಷಣದ ಮೇಲಿನ ನಿಜವಾದ ಕಾಳಜಿ ತೋರುತ್ತದೆ. ಶಿಕ್ಷಕರು ಮನಸ್ಸು ಮಾಡಿದರೆ ಎಂತಹ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ. ಮಕ್ಕಳಿಗೆ ಕೇವಲ ಅಕ್ಷರಾಭ್ಯಾಸ ನೀಡದೆ ಸಂಸ್ಕಾರವನ್ನು ನೀಡಿ ಎಂದು ಶಿಕ್ಷಕರಿಗೆ ಹೇಳಿದರು. ಜತೆಗೆ ಶಿಕ್ಷಕರೆಲ್ಲರೂ ಸೇರಿ ಈ ಸನಿಮಾ ಹೊರ ತಂದಿದ್ದು ಹೆಮ್ಮೆ ಸಂಗತಿ ಎಂದರು.

ಸಾನ್ನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿ ಮೂರು ಸಾವಿರ ವಿರಕ್ತಮಠದ ವಿರುಪಾಕ್ಷ ಸ್ವಾಮೀಜಿ, ಪ್ರಸ್ತುತ ಸಮಾಜ ಆಧುನಿಕತೆಯತ್ತ ಸಾಗುತ್ತಿದೆ. ಆದರೆ, ಹಿಂದಿನ ಪದ್ಧತಿಗಳೆಲ್ಲ ನಾಶವಾಗುತ್ತಿವೆ. ಮಾತೃ, ಪಿತೃ ದೇವೋಭವದ ಜತೆಗೆ ಸಮಾಜ ದೇವೋಭವ ಎನ್ನುವುದನ್ನು ಅರಿತುಕೊಂಡು ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬರು ದುಡಿಯಬೇಕು. ಅಂದಾಗ ಮಾತ್ರ ನಮ್ಮ ಬದುಕು ಸಾರ್ಥಕ ಆಗಲಿದೆ. ಬದುಕಿನಲ್ಲಿ ಬರುವ ಕಷ್ಟಗಳಿಗೆ ಎದೆಗುಂದದೆ ಎದುರಿಸಿ ನಿಲ್ಲಬೇಕು, ಅಂದಾಗ ಮಾತ್ರ ಶ್ರೇಷ್ಠವಾದ ಸಾಧನೆ ಮಾಡಲು ಸಾದ್ಯ ಎಂಬುದುನ್ನು ನಿವೃತ್ತ ಶಿಕ್ಷಕಿ ಸಾಲ್ಡಾನಾ ಅವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಹೊನ್ನಾಪುರದ ಧರ್ಮಗುರು ಸೈಯದ್‌ ಮೋಹಿದ್ದಿನ ಷಾ ಖಾದ್ರಿ, ಸೇಂಟ್‌ ಜೋಸೆಫ್‌ ಶಾಲೆಯ ಡಾ. ಮೈಕಲ್‌ ಸೋಜ್‌, ನವರಸ ಸ್ನೇಹಿತರ ವೇದಿಕೆ ಅಧ್ಯಕ್ಷ, ಬದುಕಿನ ಬಂಡ ಚಲನಚಿತ್ರ ನಿರ್ದೇಶಕ ಬಾಬಾಜಾನ ಮುಲ್ಲಾ, ಸಹ ನಿರ್ದೇಶಕ ಎನ್‌.ಬಿ. ದ್ಯಾಪೂರ, ಮಹಾಂತೇಶ ಹುಬ್ಬಳ್ಳಿ, ಎಲ್‌.ಐ. ಲಕ್ಕಮ್ಮನವರ, ಹಸೀನಾ ಸಮುದ್ರಿ ಸೇರಿದಂತೆ ಶಿಕ್ಷಕ ಸಂಘಟನೆ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳು ಇದ್ದರು.