ಸಾರಾಂಶ
ಚಂದ್ರನಿಗೆ ಭೂಮಿಯು ಅಡ್ಡಬಂದು ಸೂರ್ಯನ ಕಿರಣಗಳನ್ನು ತಡೆಗಟ್ಟುತ್ತದೆ. ಈ ಕಾರಣ, ಭೂಮಿಯ ವಾತಾವರಣದಲ್ಲಿ ಚದುರಿಸುವ ಕೆಂಪು ಬಣ್ಣವು, ಚಂದ್ರನ ಮೈಮೇಲಿಂದ ಪ್ರತಿಬಿಂಬಿಸುತ್ತದೆ. ಈ ಬೆಳಕಿನಿಂದಾಗಿ ಚಂದ್ರನು ಕೆಂಬಣ್ಣದಲ್ಲಿ ಗೋಚರಿಸುತ್ತಾನೆ.
ಕನ್ನಡಪ್ರಭ ವಾರ್ತೆ ಉಡುಪಿ
ಸೆ.7ರ ಹುಣ್ಣಿಮೆಯ ರಾತ್ರಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಈ ಖಗ್ರಾಸ ಚಂದ್ರಗ್ರಹಣದ ವೇಳೆ, ಚಂದ್ರನು ತಾಮ್ರದಂತೆ ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಈ ಚಂದ್ರಗ್ರಹಣವನ್ನು ಯಾವುದೇ ಅಪಾಯವಿಲ್ಲದೇ ಬರಿಗಣ್ಣಿನಲ್ಲಿ ನೋಡಬಹುದಾಗಿದೆ ಎಂದು ಉಡುಪಿಯ ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ತಿಳಿಸಿದ್ದಾರೆ.ಚಂದ್ರನಿಗೆ ಭೂಮಿಯು ಅಡ್ಡಬಂದು ಸೂರ್ಯನ ಕಿರಣಗಳನ್ನು ತಡೆಗಟ್ಟುತ್ತದೆ. ಈ ಕಾರಣ, ಭೂಮಿಯ ವಾತಾವರಣದಲ್ಲಿ ಚದುರಿಸುವ ಕೆಂಪು ಬಣ್ಣವು, ಚಂದ್ರನ ಮೈಮೇಲಿಂದ ಪ್ರತಿಬಿಂಬಿಸುತ್ತದೆ. ಈ ಬೆಳಕಿನಿಂದಾಗಿ ಚಂದ್ರನು ಕೆಂಬಣ್ಣದಲ್ಲಿ ಗೋಚರಿಸುತ್ತಾನೆ.ಖಗೋಳಶಾಸ್ತ್ರಜ್ಞರು ಆಕಾಶಕಾಯಗಳ ಬೆಳಕನ್ನು ಪರಿಮಾಣ ಮಾಪನದಿಂದ ಗುರುತಿಸುತ್ತಾರೆ (ಈ ಸಂಖ್ಯೆ ಕಡಿಮೆ ಇದ್ದಷ್ಟು ಆಕಾಶಕಾಯ ಹೆಚ್ಚು ಪ್ರಕಾಶಮಾನವಾಗಿರುತ್ತದೆ). ಸಾಮಾನ್ಯವಾಗಿ ಹುಣ್ಣಿಮೆಯ ಚಂದ್ರನ ಪರಿಮಾಣ ಸುಮಾರು ಮೈನಸ್ 13ರಷ್ಟಾಗಿರುವುದು. ಆದರೆ ಈ ಗ್ರಹಣದ ಸಮಯ ಮೈನಸ್ 1.35ರಷ್ಟು ಪರಿಮಾಣವಾಗಿರುತ್ತದೆ. ಅಂದರೆ, ಚಂದ್ರನು ಶೇ.99.9ರಷ್ಟು ಮಂದವಾಗಿ ಕಾಣಿಸುತ್ತಾನೆ.ಸೆ. 7ರಂದು, ರಾತ್ರಿ 8.50ಕ್ಕೆ ಗ್ರಹಣವು ಪ್ರಾರಂಭವಾಗುವಾಗ ಭೂಮಿಯ ಅರೆನೆರಳು ಚಂದ್ರನ ಮೇಲೆ ಬೀಳಲು ಪ್ರಾರಂಭವಾಗುತ್ತದೆ. ಭೂಮಿಯ ಅರೆನೆರಳು ಚಂದ್ರನ ಮೇಲೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಸುಮಾರು 9.57ರಿಂದ ಭೂಮಿಯ ನೆರಳು ಚಂದ್ರನ ಮೇಲೆ ಹರಿದಾಡುತ್ತದೆ. ಗ್ರಹಣ ಮುಂದುವರಿಯುತ್ತಾ 11ಕ್ಕೆ ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿನಲ್ಲಿ ಬಂದಿರುತ್ತಾನೆ. ಈ ಕ್ಷಣದಿಂದ ಮಧ್ಯರಾತ್ರಿ 12.22ರ ವರೆಗೆ (ಸುಮಾರು 1 ಗಂಟೆ 22 ನಿಮಿಷಗಳ ಕಾಲ) ಖಗ್ರಾಸ ಚಂದ್ರಗ್ರಹಣವನ್ನು ವೀಕ್ಷಿಸಬಹುದು. 11.41 ಗಂಟೆಗೆ ಗರಿಷ್ಠ ಗ್ರಹಣದ ಕಾಲದಲ್ಲಿ ಕೆಂಪು ಚಂದ್ರನನ್ನು ವೀಕ್ಷಿಸಬಹುದು. 1.26ಕ್ಕೆ ಚಂದ್ರನು, ಭೂಮಿಯ ನೆರಳಿನಿಂದ, ತದನಂತರ 2.25ಕ್ಕೆ ಭೂಮಿಯ ಅರೆನೆರಳಿನಿಂದ ಹೊರಬರುತ್ತಾನೆ. ಈ ಗ್ರಹಣದ ವಿವಿಧ ಹಂತಗಳು ಸುಮಾರು 5 ಗಂಟೆ 27 ನಿಮಿಷಗಳ ಕಾಲ ನಡೆಯುತ್ತದೆ.ಈ ಗ್ರಹಣವು ಭಾರತ, ಚೀನಾ, ಮಂಗೋಲಿಯಾ, ರಷ್ಯಾದ ಕೇಂದ್ರ ಭಾಗ, ಮಲೇಷ್ಯಾ, ಸಿಂಗಾಪುರ್, ಇಂಡೋನೇಷ್ಯಾ, ಶ್ರೀಲಂಕಾ ಸೇರಿದಂತೆ ಇತರ ಏಷ್ಯಾ ಖಂಡದ ವಿವಿಧ ದೇಶಗಳಿಂದ ಹಾಗೂ ಆಫ್ರಿಕಾ ಖಂಡದ ಪೂರ್ವ ಭಾಗ, ಗಲ್ಫ್ ದೇಶಗಳು ಮತ್ತು ಆಸ್ಟ್ರೇಲಿಯಾದಿಂದ ಗೋಚರಿಸುತ್ತದೆ.ಭಾರತದ ಎಲ್ಲ ಭಾಗಗಳಿಂದ ಎಲ್ಲರೂ ಕೂಡ ಈ ಖಗೋಳ ವಿದ್ಯಾಮಾನವನ್ನು ಬರಿಗಣ್ಣಿನಿಂದಲೇ, ಯಾವುದೇ ಹಾನಿಯಿಲ್ಲದೆ ವೀಕ್ಷಿಸಬಹುದು ಎಂದು ಅತುಲ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.