ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ರಾಜ್ಯದ ಹಲವು ದೇವಾಲಯಗಳು ಬಂದ್‌ ಆಗಿದ್ದು, ಮೋಕ್ಷ ಕಾಲದ ಬಳಿಕ ದೇವಾಲಯಗಳ ಶುದ್ಧೀಕರಣ ಕೈಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ತೀರ್ಥಕ್ಷೇತ್ರಗಳಲ್ಲಿ ಭಕ್ತರು ಗ್ರಹಣ ಕಾಲದಲ್ಲಿ ಪುಣ್ಯಸ್ನಾನ ಮಾಡಿ, ವಿಶೇಷ ಗ್ರಹಣ ಶಾಂತಿ, ಜಪಾದಿ ಅನುಷ್ಠಾನಗಳನ್ನು ನಡೆಸಿದರು,

ದೇವಾಲಯಗಳಲ್ಲಿ ಮಧ್ಯಾಹ್ನದ ಪ್ರಸಾದ ಭೋಜನ ವ್ಯವಸ್ಥೆಯನ್ನೂ ನಿಲ್ಲಿಸಲಾಗಿತ್ತು. ಮಧ್ಯಾಹ್ನ 3.20ರ ಸುಮಾರಿಗೆ ಗ್ರಹಣ ಸ್ಪರ್ಶವಾಗಿದ್ದು, ಮಧ್ಯಕಾಲ ಸಂಜೆ 5.04 ಆಗಿತ್ತು. ಉನ್ಮಿಲನ ಕಾಲ ಸಂಜೆ 5.33 ಆಗಿದ್ದು, 6.47ಕ್ಕೆ ಮೋಕ್ಷ ಕಾಲ ಉಂಟಾಯಿತು.

ಭಕ್ತರ ದಂಡು:

ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದಲ್ಲಿ ಬಾಗಿಲು ಹಾಕಿದ್ದರೂ, ಗ್ರಹಣದ ವೇಳೆ 20,000ಕ್ಕೂ ಅಧಿಕ ಭಕ್ತರು ಹೊರಗಿನಿಂದಲೇ ಅಮ್ಮನವರಿಗೆ ಕೈಮುಗಿದು ಪ್ರಾರ್ಥಿಸಿದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗ್ರಹಣದ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಸರ್ಪಸಂಸ್ಕಾರ ಪೂಜೆ ಇರಲಿಲ್ಲ.


ಇದೇ ವೇಳೆ, ಬೆಂಗಳೂರಿನ ಪ್ರಸಿದ್ಧ ದೇಗುಲ ಬಂಡೆ ಮಹಾಕಾಳಿ ದೇವಸ್ಥಾನದ ಬಾಗಿಲು ಎಂದಿನಂತೆ ತೆರೆದಿದ್ದು, ಗ್ರಹಣ ಕಾಲದಲ್ಲಿ ತಾಯಿಗೆ ತುಪ್ಪದ ಅಭಿಷೇಕ, ಚಂದ್ರಶಾಂತಿ ಹೋಮ ನೆರವೇರಿಸಲಾಯಿತು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗ್ರಹಣದ ವೇಳೆಯಲ್ಲಿಯೂ ಸಾರ್ವಜನಿಕರಿಗೆ ಗುರುರಾಯರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಗೋಕರ್ಣದಲ್ಲಿ ಗ್ರಹಣದ ಸಂದರ್ಭ ಆತ್ಮಲಿಂಗದ ಸ್ಪರ್ಶದರ್ಶನ ಇರಲಿಲ್ಲ. ಭಕ್ತರು ದೇವರ ದರ್ಶನ ಪಡೆದು, ಸಮುದ್ರ ಸ್ನಾನ ಮಾಡಿ, ದಾನ-ಧರ್ಮ ನೆರವೇರಿಸಿದರು. ಕೊಲ್ಲೂರು ಮೂಕಾಂಬಿಕೆ, ಉಡುಪಿಯ ಶ್ರೀ ಕೃಷ್ಣಮಠದಲ್ಲಿ ದೇವರ ದರ್ಶನ ಎಂದಿನಂತಿತ್ತು. ಆದರೆ, ಮಧ್ಯಾಹ್ನ ಮತ್ತು ರಾತ್ರಿಯ ಅನ್ನಪ್ರಸಾದ ವಿತರಣೆ ಇರಲಿಲ್ಲ.

ಆಕಾಶ ವೀಕ್ಷಣೆ:

ಈ ಮಧ್ಯೆ, ಗ್ರಹಣದ ವೇಳೆ ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಬೆಂಗಳೂರಿನ ನೆಹರೂ ತಾರಾಲಯಗಳಲ್ಲಿ ಸಂಜೆ 6:30ರಿಂದ ರಾತ್ರಿ 8:30ರವರೆಗೆ ಆಕಾಶ ವೀಕ್ಷಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಲವೆಡೆ ಮೂಢನಂಬಿಕೆ ವಿರೋಧಿ ಸಂಸ್ಥೆಗಳು ಗ್ರಹಣ ಕಾಲದಲ್ಲಿ ಉಪಾಹಾರ ವ್ಯವಸ್ಥೆ ಮಾಡಿದ್ದು, ಮೂಢನಂಬಿಕೆಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು.