ಖಗ್ರಾಸ ಚಂದ್ರಗ್ರಹಣ: ರಾಜ್ಯದ ವಿವಿಧ ದೇಗುಲಗಳು ಬಂದ್‌

| Published : Sep 08 2025, 01:01 AM IST

ಖಗ್ರಾಸ ಚಂದ್ರಗ್ರಹಣ: ರಾಜ್ಯದ ವಿವಿಧ ದೇಗುಲಗಳು ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದ ರಾಜ್ಯದ ಹಲವು ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು. ಕೆಲವು ದೇಗುಲಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದ ರಾಜ್ಯದ ಹಲವು ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು. ಕೆಲವು ದೇಗುಲಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ಬೆಂಗಳೂರು ನಗರದ ಗವಿಗಂಗಾಧರೇಶ್ವರ ದೇವಸ್ಥಾನವನ್ನು ಬೆಳಗ್ಗೆ 11 ಗಂಟೆಗೆ ಬಂದ್‌ ಮಾಡಿ ಗ್ರಹಣದ ಛಾಯೆ ದೇವರನ್ನು ದರ್ಬಾಬಂಧನವನ್ನು ಮಾಡಲಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ದೇವಸ್ಥಾನಗಳ ಸೇವೆಗಳು ಹಾಗೂ ಭಕ್ತರ ದರ್ಶನ ಅವಧಿ ಬದಲಾವಣೆ ಮಾಡಲಾಗಿತ್ತು. ಉಡುಪಿ ಕೃಷ್ಣ ಮಠದಲ್ಲಿ ಗ್ರಹಣ ಕಾಲದಲ್ಲಿ ಕೃಷ್ಣ ಮಠದಲ್ಲಿ ಗ್ರಹಣ ಶಾಂತಿ ಹವನ ಆಯೋಜಿಸಲಾಗಿತ್ತು. ಗ್ರಹಣದ ಮಧ್ಯಕಾಲದಲ್ಲಿ ಕೃಷ್ಣನಿಗೆ ಪರ್ಯಾಯ ಶ್ರೀಗಳು ಆರತಿ ಬೆಳಗಿದರು. ಗ್ರಹಣದ ದೋಷ ನಿವಾರಣೆಗೆ 1008 ಜನರಿಂದ 1008 ಬಾರಿ ಕೃಷ್ಣಮಂತ್ರ ಜಪ ನಡೆಯಿತು.

ಕೊಲ್ಲೂರು ಮೂಕಾಂಬಿಕಾ ದೇವಿಗೆ ಗ್ರಹಣ ಕಾಲದುದ್ದಕ್ಕೂ ಲೋಕಕಲ್ಯಾಣಾರ್ಥವಾಗಿ ಅರ್ಚಕರು ನಿರಂತರವಾಗಿ ಅಭಿಷೇಕಗಳನ್ನು ನಡೆಸಿದರು. ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆ ನಂತರ ಯಾವುದೇ ಸೇವೆ ಇರಲಿಲ್ಲ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ರಾತ್ರಿ 8 ಗಂಟೆ ಬಳಿಕ ದೇವಳವನ್ನು ಮುಚ್ಚಳಲಾಯಿತು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗ್ರಹಣ ಆರಂಭದಿಂದ ಮಧ್ಯಕಾಲದ ತನಕ ದೇವರಿಗೆ ಅಭಿಷೇಕ ನಡೆಯಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಜೆ 5 ಗಂಟೆವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ದೇವಿ ದರ್ಶನಕ್ಕೆ ಭಕ್ತರ ದಂಡು ಆಗಮಿಸಿತು. ಗ್ರಹಣ ಕಾಲದಲ್ಲಿ ನಿಮಿಷಾಂಭ ದೇವಿಗೆ ಮಂತ್ರಪಠಣದ ಮೂಲಕ ಜಲಾಭಿಶೇಕ ಮಾಡಲಾಯಿತು. ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನವನ್ನು ಸಂಜೆ 4 ಗಂಟೆಗೆ ಬಂದ್ ಮಾಡಲಾಯಿತು. ಗ್ರಹಣದ ವೇಳೆ ದೇವಸ್ಥಾನ ಒಳಭಾಗದಲ್ಲಿ ಪೂಜೆ ನಡೆಯಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶರ ಇರಲಿಲ್ಲ.

ದೊಡ್ಡಬಳ್ಳಾಪುರ ತಾಲೂಕಿನ ನಾಗಾರಾಧನಾ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಹಾದ್ವಾರಗಳಿಗೆ ಸಂಜೆ ಬೀಗ ಹಾಕಲಾಯಿತು.