- ವಿಶ್ವ ಹಾಲು ದಿಣಾಚರಣೆ ಪ್ರಯುಕ್ತ ರೋಗಿಗಳಿಗೆ ಹಾಲು, ಬ್ರೆಡ್ ವಿತರಿಸಿ ಭರಣಿ ವೆಂಕಟೇಶ್

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಭಾರತದ ಹೈನೋದ್ಯಮದ ಪಿತಾಮಹ ಡಾ.ಕುರಿಯನ್‌ ಅವರು ಹೈನುಗಾರಿಕೆಯನ್ನು ಸಹಕಾರ ರಂಗದೊಂದಿಗೆ ಜನತೆಗೆ ಪರಿಚಯಿಸಿದ ಪರಿಣಾಮವೇ ಇಂದು ಸಾಕಷ್ಟು ಜನರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಚಿಮುಲ್‌, ಕೆಎಂಎಫ್ ನಿರ್ದೇಶಕ ಭರಣಿ ವೆಂಕಟೇಶ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ವಿಶ್ವ ಹಾಲು ದಿಣಾಚರಣೆ ಪ್ರಯುಕ್ತ ರೋಗಿಗಳಿಗೆ ಹಾಲು ಮತ್ತು ಬ್ರೆಡ್ ವಿತರಣೆ ಮಾಡಿ ಮಾತನಾಡಿ, ಮಾಜಿ ಸಚಿವ ಕೋಲಾರ ಮೂಲದ ಎಂ.ವಿ.ಕೃಷ್ಣಪ್ಪನವರನ್ನು ಕರ್ನಾಟಕದ ಹೈನುಗಾರಿಕೆಯ ಜೀವದಾತ ಎಂದರೆ ತಪ್ಪಾಗಲಾರದು. ಬಯಲು ಸೀಮೆಯ ಬರಡು ಪ್ರದೇಶದಲ್ಲಿ ರೈತರು ಕೇವಲ ದೇಸಿ ಹಸುಗಳಿಂದ ಸಿಗುವ ಅಲ್ಪ ಹಾಲಿನಿಂದ ಹೈನುಗಾರಿಕೆ ನಡೆಸುತ್ತಿದ್ದರು. ಅದರಿಂದ ನಯಾ ಪೈಸೆ ಲಾಭವೂ ಬರುತ್ತಿರಲಿಲ್ಲ. ಆಗ ಎಂ.ವಿ. ಕೃಷ್ಣಪ್ಪನವರು ಡೆನ್ಮಾರ್ಕ್‌ನಿಂದ ಹೆಚ್ಚು ಹಾಲು ಕೊಡುವ ವಿದೇಶಿ ಎಚ್.ಎಫ್. ತಳಿಯ ಸೀಮೆ ಹಸುಗಳನ್ನು ತರಿಸಿ ರೈತರಿಗೆ ನೀಡಿದ ಪರಿಣಾಮ ರಾಜ್ಯದಲ್ಲಿ ಕ್ಷೀರ ಕ್ರಾಂತಿ ಉಂಟಾಯಿತು.

ವಿಶ್ವ ಆಹಾರ ಸಂಸ್ಥೆ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ೨೦೦೧ರಲ್ಲಿ ಜೂನ್ ೧ನೇ ತಾರೀಖನ್ನು ವಿಶ್ವಹಾಲು ದಿನವನ್ನಾಗಿ ಘೋಷಿಸಿ ಆಚರಿಸುತ್ತಿದೆ. ಆದರೆ ಕಾಕಾತಾಳಿಯವೆಂಬತೆ ಇಂದೇ ಎಂ.ವಿ.ಕೃಷ್ಣಪ್ಪನವರ ಜನ್ಮದಿನವೂ ಆಗಿದೆ ಎಂದು ಹೇಳಿದರು.


ಚಿಮುಲ್ ಒಕ್ಕೂಟ ಶಿಭಿರ ವ್ಯವಸ್ಥಾಪಕ ಮನೋರಂಜನ್ ರೆಡ್ಡಿ ಮಾತನಾಡಿ, ಹಾಲಿನಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೆಚ್ಚಾಗಿದ್ದು, ಇದು ಮೂಳೆ ಮತ್ತು ಹಲ್ಲುಗಳಿಗೆ ಬಹಳ ಪ್ರಯೋಜನಕಾರಿ. ಹಾಲಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳ ಆಂಶವಿದೆ. ಆರೋಗ್ಯವಂತರಾಗಿರಲು ಎಲ್ಲರೂ ಹಾಲು ಕುಡಿಯಬೇಕು. ಇಂದಿನ ದಿನಗಳಲ್ಲಿ ಎಷ್ಟೇ ಔಷಧಿ ಚಿಕಿತ್ಸೆ ನೀಡಿದರು ಸಹಾ ಸಿಗದ ಚೇತರಿಕೆ ಹಾಲಿನಿಂದ ದೊರೆಯುತ್ತದೆ. ಹಾಲಿನ ಪ್ರಾಮುಖ್ಯತೆ ತಿಳಿದು ಕೊಳ್ಳಲು ಮತ್ತು ನಮ್ಮ ನಂದಿನಿಯ ಶುದ್ಧ ಹಾಲು ಉತ್ಪನ್ನಗಳನ್ನು ಸೇವಿಸುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಅರಿವು ಮೂಡಿಸಲು ಈ ವಿಶ್ವ ಹಾಲು ದಿನ ಅವಕಾಶ ಒದಗಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿಮುಲ್ ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ಹರ್ಷ, ನಿಖಿಲ್, ಪಾಪಣ್ಣ, ಜಿಲ್ಲಾಸ್ಪತ್ರೆಯ ವೈದ್ಯರು, ನರ್ಸಿಂಗ್ ಮುಖ್ಯಸ್ಥೆ ವಿಜಯಲಕ್ಷ್ಮಿ, ಶಿಬಿರ ಕಚೇರಿ ಸಿಬ್ಬಂದಿ ಇದ್ದರು.

ಸಿಕೆಬಿ-2 ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಕೆಎಂಎಫ್ ನಿರ್ದೇಶಕ ಭರಣಿ ವೆಂಕಟೇಶ್ ರೋಗಿಗಳಿಗೆ ಹಾಲು ಮತ್ತು ಬ್ರೆಡ್ ವಿತರಣೆ ಮಾಡಿದರು.