ಸಾರಾಂಶ
ಮಾದಾಪುರ ಗ್ರಾ.ಪಂ. ಹಲವು ಸಮಸ್ಯೆಗಳ ಆಗರವಾಗಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ. ಜನರೆ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಮಾದಾಪುರ ಗ್ರಾಮ ಪಂಚಾಯಿತಿ ಹಲವು ಸಮಸ್ಯೆಗಳ ಆಗರವಾಗಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ.2ನೇ ಅವಧಿಯ ಅಧ್ಯಕ್ಷರ ಆಯ್ಕೆಯಾಗಿ 1ವರ್ಷ ಸಮೀಪಿಸಿದೆ. ಜಿಲ್ಲೆಯ ಎಲ್ಲ ಪಂಚಾಯಿತಿಗಳ ಗ್ರಾಮ ಸಭೆ ನೂತನ ಅಧ್ಯಕ್ಷತೆ ಆಯ್ಕೆಯಾದ ನಂತರ ನಡೆದರೂ ಮಾದಾಪುರ ಗ್ರಾ.ಪಂ. ಗ್ರಾಮಸಭೆ ಇನ್ನೂ ನಡೆಸಲು ಆಡಳಿತ ಮಂಡಳಿಗೆ ಸಮಯಾವಕಾಶ ಕೂಡಿ ಬಂದಂತೆ ಕಾಣುತ್ತಿಲ್ಲ.
ಆಗಾಗ್ಗೆ ಮಾದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರ್ಗಾವಣೆಯಾಗುತ್ತಿದ್ದಾರೆ. ಈಗ ಅಧಿಕಾರ ಸ್ವೀಕರಿಸಿಕೊಂಡ ಪಿಡಿಓ ಬಾಲಕೃಷ್ಣ ಅವರಿಗೆ ಐಗೂರು ಹಾಗೂ ಮಾದಾಪುರ ಪಂಚಾಯಿತಿಯ ಹೆಚ್ಚುವರಿ ಜವಾಬ್ಧಾರಿ ನೀಡಿರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ.ಜಂಬೂರು ಗ್ರಾಮದಲ್ಲಿ ಮಿಷನ್ ಯೋಜನೆಯ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಜ್ವಲಂತವಾಗಿ ಉಳಿದಿದೆ. ಜಲಜೀವನ್ ಯೋಜನೆ ಗುತ್ತಿಗೆ ಪಡೆದವರು ಅರ್ಧದಲೇ ಕೆಲಸ ನಿಲ್ಲಿಸಿ ಪಲಾಯನವಾಗಿದ್ದರೂ ಈ ಬಗ್ಗೆ ಗ್ರಾ.ಪಂ. ಏನು ಕ್ರಮ ಕೈಗೊಂಡಿಲ್ಲ.
ಜಂಬೂರು ಫೀಲ್ಡ್ ಮಾರ್ಷಲ್ ಬಡಾವಣೆಯ ನಿವಾಸಿಗಳು ಅವೈಜ್ಞಾನಿಕವಾಗಿ ಮನೆ ನಿರ್ಮಿಸಿರುವುದರಿಂದ ಸೆಪ್ಟಿಂಕ್ ಟ್ಯಾಂಕ್‌ನ ನೀರು ಚರಂಡಿಯಲ್ಲಿ ಕಟ್ಟಿನಿಂತ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಬದುಕು ದೂಡುತ್ತಿದ್ದಾರೆ. ಕಸ ವಿಲೇವಾರಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ತಾತ್ಕಾಲಿಕವಾಗಿ ತೋಟಗಾರಿಕಾ ಇಲಾಖೆ ಜಾಗದಲ್ಲಿ ಕಸ ವಿಲೇವಾರಿಗೊಳಿಸಲಾಗುತ್ತಿದ್ದು, ಇಲ್ಲಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.ಮೂವತೋಕ್ಲುವಿನಲ್ಲಿ ಕಸ ವಿಲೇವಾರಿ ಪೈಸಾರಿ ಜಾಗ ಗುರುತಿಸಿದ್ದರೂ, ಪಂಚಾಯಿತಿ ಖಾತೆಗೆ ಇನ್ನೂ ದಾಖಲಿಸಿಕೊಳ್ಳಲಾಗದೆ ಸಮಸ್ಯೆಯಾಗಿದೆ. ಈ ಜಾಗದಲ್ಲಿ ನಿವೇಶನ ರಹಿತರಿಗೂ 2 ಎಕ್ರೆ ಜಾಗ ಗುರುತಿಸಲಾಗಿದ್ದು, ಅದು ಕಾರ್ಯರೂಪಕ್ಕೆ ಬಂದಿಲ್ಲ. ಮನೆ ಇಲ್ಲದೆ ನೂರಾರು ಮಂದಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ದಶಕಗಳ ಕಾಲದಿಂದ ಕಾಯುತ್ತಿದ್ದಾರೆ.
ಜನರ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.