ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರಕ್ಕೆ ನೂತನ ಸಾರಥಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಚಿವ ಸಂಪುಟವೂ ಪುನಾರಚನೆಯಾಗುತ್ತಿದ್ದು, ಮಾದಿಗ ಸಮುದಾಯದ ಪ್ರಮುಖ ನಾಯಕರಾದ ಕೆ.ಎಚ್.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಶೋಷಿತರ ಪರ ನಿಲುವು ಕೈಗೊಳ್ಳಬೇಕು ಎಂದು ಮಾದಾರ ಮಹಾಸಭಾ ಮುಖಂಡ ರಾಮಕೃಷ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅತಿ ದೊಡ್ಡ ಸಮುದಾಯವಾದ ಮಾದಿಗ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಇನ್ನಷ್ಟು ಬಲಿಷ್ಠ ಹಾಗೂ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕು. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಆರ್.ಬಿ.ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ಹಾಗೂ ಎಚ್. ಆಂಜನೇಯ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ರಾಜ್ಯ ರಾಜಕೀಯದಲ್ಲಿ ದಲಿತರ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ದಲಿತ ಮುಖಂಡ ಪುರುಷೋತ್ತಮ್ ಮಾತನಾಡಿ, ಮಾದಿಗ ಜನಾಂಗ ರಾಜ್ಯದಲ್ಲಿ ಅತಿ ದೊಡ್ಡ ದಲಿತ ಸಮುದಾಯವಾಗಿದ್ದು, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆದ ಸಾಮಾಜಿಕ ನ್ಯಾಯ ಒಳಗೊಂಡಂತೆ ಹಲವು ಪ್ರಗತಿಪರ, ಜನಪರ ಹೋರಾಟಗಳಲ್ಲಿ ನಿರಂತರವಾಗಿ ಪ್ರಮುಖ ಪಾತ್ರವಹಿಸುವ ಮೂಲಕ ಶಕ್ತಿ ತುಂಬುವ ಕಾರ್ಯ ಮಾಡಿದೆ. ಆದಾಗ್ಯೂ, ಸಮುದಾಯಕ್ಕೆ ಸರ್ಕಾರದಲ್ಲಿ ತಕ್ಕ ಮಟ್ಟಿನ ರಾಜಕೀಯ ಸ್ಥಾನಮಾನ ಸಿಗೆದಿರುವುದು ಬೇಸರದ ಸಂಗತಿಯಾಗಿದೆ. ಮುನಿಯಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜಕೀಯ ಸ್ಥಾನಮಾನದ ಕೊರತೆ ನೀಗಿಸಬೇಕು ಎಂದರು.
ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ತಳವಾರ ನಾಗರಾಜ್ ಮಾತನಾಡಿ, ರಾಜ್ಯದ ಅತಿ ದೊಡ್ಡ ದಲಿತ ಸಮುದಾಯದ ಜನಸಂಖ್ಯೆ, ಕೊಡುಗೆಯನ್ನು ಪರಿಗಣಿಸಿದರೆ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜಕೀಯ ಶಕ್ತಿ ಹೆಚ್ಚಿಸಬೇಕು ಎಂದರು.ಮುಖಂಡರಾದ ಅಪ್ಪಕಾರನಹಳ್ಳಿ ಹನುಮಯ್ಯ, ದೊಡ್ಡತುಮಕೂರು ವೆಂಕಟೇಶ್, ಗಂಗರಾಜು, ಸಂಜಯನಗರ ವೆಂಕಟೇಶ್, ಕಾಡಾಲಪನಹಳ್ಳಿ ಮುನಿಯಪ್ಪ, ಮೆಳೇಕೋಟೆ ಹನುಮಂತಯ್ಯ, ಕಾಡನೂರು ಲಕ್ಕಪ್ಪ, ಆರ್.ವಿ.ಮಹೇಶ್, ಶಿವಕುಮಾರ್, ಮನು, ಮಲ್ಲೋಹಳ್ಳಿ ಶ್ರೀ ರಾಮ್ , ರಾಜಘಟ್ಟ ಕಾಂತರಾಜು, ಖಾನೆಹೊಸಳ್ಳಿ ಮಂಜುನಾಥ್, ಬಿಳಿಕೆರೆ ಮುನಿರಾಜು , ಕಲ್ಲುಕೋಟೆ ನಾಗರಾಜು, ಕುರುವಿಗೆರೆ ಚಿಕ್ಕನರಸಪ್ಪ, ಮುನಿರಾಜು, ಟಿ.ಡಿ.ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.
30ಕೆಡಿಬಿಪಿ2- ಕೆ.ಎಚ್.ಮುನಿಯಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರದಲ್ಲಿ ಮಾದಾರ ಮಹಾಸಭಾ ಮುಖಂಡರು ಒತ್ತಾಯಿಸಿದರು.