ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಬೆಳವಣಿಗೆಗೆ ಶ್ರಮಿಸಿದ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಜೀವನತತ್ವಗಳನ್ನು ಜನಸಾಮಾನ್ಯರು ಅರ್ಥೈಸಿಕೊಂಡು ಪಾಲಿಸಿದಾಗ ಮಾತ್ರ ಅವರ ಜಯಂತಿ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ ಎಂದು ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದರು
ಉಡುಪಿ: ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಬೆಳವಣಿಗೆಗೆ ಶ್ರಮಿಸಿದ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಜೀವನತತ್ವಗಳನ್ನು ಜನಸಾಮಾನ್ಯರು ಅರ್ಥೈಸಿಕೊಂಡು ಪಾಲಿಸಿದಾಗ ಮಾತ್ರ ಅವರ ಜಯಂತಿ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ ಎಂದು ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದರುಶುಕ್ರವಾರ ಮಣಿಪಾಲ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿಯ ಪಾಜಕ ಕ್ಷೇತ್ರದ ಪುಣ್ಯ ಭೂಮಿಯಲ್ಲಿ ಅವತರಿಸಿದ ಜಗದ್ಗುರು ಮಧ್ವಾಚಾರ್ಯರು ನಡೆದಾಡಿದ ಪುಣ್ಯಭೂಮಿಯಲ್ಲಿ ನಾವೆಲ್ಲರೂ ಜೀವನ ನಡೆಸುತ್ತಿರುವುದು ಉಡುಪಿಯ ಜನತೆಯ ಪಾಲಿಗೆ ಸದಾ ಹೆಮ್ಮೆಯ ವಿಷಯ ಎಂದರು.ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಬಿ. ಗೋಪಾಲ್ ಆಚಾರ್ ಜಗದ್ಗುರು ಶ್ರೀ ಮಧ್ವಾಚಾರ್ಯರ ಕುರಿತು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಕಿತ್ತೂರುರಾಣಿ ಚೆನ್ನಮ್ಮರ ಕುರಿತು ಉಪನ್ಯಾಸ ನೀಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಅಧ್ಯಕ್ಷ ಜಯರಾಮ ಆಚಾರ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಿರಂಜನ ಚೋಳಯ್ಯ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಉಪನ್ಯಾಸಕ ರಾಮಾಂಜಿ ನಿರೂಪಿಸಿ ವಂದಿಸಿದರು.ಮುಂದಿನ ವರ್ಷ ವೈಭವದಿಂದ ಆಚರಣೆ : ಉಡುಪಿಯಲ್ಲಿ ಶ್ರೀಕೃಷ್ಣಮಠ - ಅಷ್ಟಮಠಗಳನ್ನು ಸ್ಥಾಪಿಸಿ, ಉಡುಪಿಯನ್ನು ಜಗತ್ತಿಗೆ ಪರಿಚಯಿಸಿದ ಜಗದ್ಗುರುಗಳ ಜಯಂತಿ ಆಚರಣೆಯನ್ನು ಮುಂದಿನ ದಿನಗಳಲ್ಲಿ ಶ್ರೀಕೃಷ್ಣ ಮಠದ ಅಷ್ಟಮಠಗಳ ಯತಿಗಳ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ವೈಭವಯುತವಾಗಿ ರಾಜ್ಯಕ್ಕೆ ಮಾದರಿಯಾಗುವಂತೆ ಆಯೋಜಿಸುವ ಆಶಯವನ್ನು ಯಶ್ಪಾಲ್ ವ್ಯಕ್ತಪಡಿಸಿದರು.