ಮದ್ದೂರು ನಗರ ಕೋಟೆ ಬೀದಿ ಶ್ರೀಉಗ್ರ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಬೆಳ್ಳಿ ಸಾರೋಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಶಾಸಕ ಕೆ.ಎಂ.ಉದಯ್ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ನಗಾರಿ ಬಾರಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಸಮ್ಮೇಳನಾಧ್ಯಕ್ಷೆ ಡಾ.ಎಂ.ಕೆಂಪಮ್ಮ ಅವರನ್ನು ಕಲಾತಂಡಗಳೊಂದಿಗೆ ಭವ್ಯ ಮೆರವಣಿ ಮೂಲಕ ವೇದಿಕೆಗೆ ಕರೆತರಲಾಯಿತು.

ಪಟ್ಟಣದ ಕೋಟೆ ಬೀದಿ ಶ್ರೀಉಗ್ರ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಬೆಳ್ಳಿ ಸಾರೋಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಶಾಸಕ ಕೆ.ಎಂ.ಉದಯ್ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ನಗಾರಿ ಬಾರಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಬಳಿಕ ಮೆರವಣಿಗೆ ಕೋಟೆ ಬೀದಿ ಮಾರ್ಗವಾಗಿ ಹಳೇ ಎಂ.ಸಿ.ರಸ್ತೆ, ಪೇಟೆ ಬೀದಿ ಮೂಲಕ ತಾಲೂಕು ಕ್ರೀಡಾಂಗಣವನ್ನು ತಲುಪಿತು. ಪೂರ್ಣಪ್ರಜ್ಞಾ ಶಾಲೆ ವಿದ್ಯಾರ್ಥಿಗಳು ಪೂರ್ಣ ಕುಂಭದ ಮೆರವಣಿಗೆ, ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ನೀಡಿದರು. ವಿವಿಧ ಶಾಲಾ ವಿದ್ಯಾರ್ಥಿಗಳು 100 ಅಡಿ ಉದ್ದದ ಕನ್ನಡ ಬಾವುಟದೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದರು. ಕಸಾಪ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು ಪಾಲ್ಗೊಂಡು ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಮೆರಗು ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಕಸಾಪ ಪದಾಧಿಕಾರಿಗಳಾದ ಕೆ.ಎಸ್.ಸುನಿಲ್ ಕುಮಾರ್, ಡಾ.ಬಿ.ಕೃಷ್ಣ, ಅಪೂರ್ವ ಚಂದ್ರ, ಕೆ.ಪಿ.ಶ್ರೀಧರ, ಎಚ್‍.ಕೆ.ಆನಂದ, ಶಿವನಂಜಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸಿ. ಚೆಲುವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಮನ್ಮುಲ್ ಮಾಜಿ ನಿರ್ದೇಶಕ ಲಿಂಗದೊಡ್ಡಿ ರಾಮಕೃಷ್ಣ, ತಾಪಂ ಮಾಜಿ ಸದಸ್ಯ ಬೊಮ್ಮೇಗೌಡ, ಈರಯ್ಯ, ದೇಶಹಳ್ಳಿ ಶಿವಪ್ಪ, ಮಾರಸಿಂಗನಹಳ್ಳಿ ರಾಮಚಂದ್ರ, ಪಣ್ಣೆದೊಡ್ಡಿ ಸುಧಾಕರ, ದಿನೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಇಂಗ್ಲಿಷ್ ಭಾಷೆ ವ್ಯಾಮೋಹ, ಪರಭಾಷಿಕರ ಹಾವಳಿಯಿಂದ ಕನ್ನಡ ಭಾಷೆಗೆ ಧಕ್ಕೆ: ಡಾ.ಎಂ.ಕೆಂಪಮ

ಕನ್ನಡಪ್ರಭ ವಾರ್ತೆ ಮದ್ದೂರುಇಂಗ್ಲಿಷ್ ಭಾಷೆ ವ್ಯಾಮೋಹ ಮತ್ತು ಪರಭಾಷಿಕರ ಹಾವಳಿಯಿಂದಾಗಿ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಸಮ್ಮೇಳನಾಧ್ಯಕ್ಷೆ ಡಾ.ಎಂ.ಕೆಂಪಮ್ಮ ಆತಂಕ ವ್ಯಕ್ತಪಡಿಸಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 10 ನೇ ಕನ್ನಡ ಸಾಹಿತ್ಯ ತಾಲೂಕು ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ, ಪರ ಭಾಷಿಕರಿಗೆ ಕನ್ನಡ ಕಲಿಸುವ ಸಲುವಾಗಿಯೇ ಕನ್ನಡ ಕಲಿಕಾ ಕೇಂದ್ರ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.ಕರ್ನಾಟಕದಲ್ಲಿನ ಅನ್ಯ ಭಾಷಿಕರಿಗೆ ಕನ್ನಡ ಕಲಿಸಿ ಅವರನ್ನು ಕನ್ನಡಿಗರಾಗಿ ಮಾಡಬೇಕಿದೆ. ಈಗಿನ ಶಿಕ್ಷಣ ಪದ್ಧತಿಯಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಅಪಾಯಕಾರಿ ಎದುರಾಗುವ ಸಾಧ್ಯತೆ ಇದೆ ಎಂದರು.

ಕನ್ನಡಿಗರು ಹಾಗೂ ಕನ್ನಡ ಸಾಹಿತಿಗಳು ಕನ್ನಡಕ್ಕೆ ಹೆಚ್ಚು ಹೊತ್ತು ನೀಡಬೇಕಾಗಿದೆ. ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವ ಸಂಪತ್ಬರಿತ ಕನ್ನಡ ಭಾಷೆ ಸಂರಕ್ಷಿಸಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಬೇಕು ಎಂದರು.ಕನ್ನಡ ನಶಿಸಿ ಹೋಗುವ ಹಾಗೂ ಇತರೆ ಭಾಷೆಗಳ ದಾಳಿಗೆ ಸಿಲುಕಿ ಬಲಹೀನವಾಗುವ ಪರಿಸ್ಥಿತಿ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಕನ್ನಡವನ್ನು ಸಂರಕ್ಷಿಸುವ ಕಾರ್ಯಕ್ಕೆ ತೊಡಗಬೇಕೆಂದು ಕೆಂಪಮ್ಮ ಸಲಹೆ ನೀಡಿದರು.

ನಮ್ಮ ರಾಜ್ಯದಲ್ಲಿ 6 ಕೋಟಿಗೂ ಹೆಚ್ಚಿನ ಜನಸಂಖ್ಯೆ ಇದೆ. ಅರ್ಧದಷ್ಟು ಜನ ಅನ್ಯ ಭಾಷಿಕರಾಗಿದ್ದಾರೆ. ಕನ್ನಡ ಭಾಷೆಯನ್ನು ಹೆಚ್ಚು ಮಾತನಾಡುತ್ತಿರುವುದು ಹಳೇ ಮೈಸೂರು ಪ್ರಾಂತ್ಯದಲ್ಲಿ ಮಾತ್ರವಾಗಿದೆ. ಪ್ರತಿಯೊಬ್ಬರು ಕನ್ನಡ ಮಾತನಾಡಬೇಕು. ನಮ್ಮ ನೆಲ, ಜಲ, ಭಾಷೆ ಉಳಿಸಲು ಎಲ್ಲರೂ ಕಂಕಣ ಬದ್ಧರಾಗಬೇಕೆಂದು ಸಮ್ಮೇಳನಾಧ್ಯಕ್ಷರು ಸಲಹೆ ನೀಡಿದರು.ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಸುಂಧರಾ, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಸವರಾಜು ಮತ್ತಿತರರು ಇದ್ದರು.