ಮದ್ದೂರು: ವಿವಿಧ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ

| Published : Nov 18 2025, 12:30 AM IST

ಮದ್ದೂರು: ವಿವಿಧ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ಪಟ್ಟಣದ ಹಳೆ ಬಸ್ ನಿಲ್ದಾಣದ ಶ್ರೀಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಕಡೇ ಕಾರ್ತಿಕ ಮಾಸದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು.

ಕನ್ನಡಪ್ರಭ ವಾರ್ತೆ ಮದ್ದೂರು

ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಪಟ್ಟಣ ಸೇರಿದಂತೆ ವಿವಿಧ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು.

ತಾಲೂಕಿನ ಪುರಾತನ ವೈದ್ಯನಾಥೇಶ್ವರ ದೇವಾಲಯದಲ್ಲಿ ಮುಂಜಾನೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ಮತ್ತು ಪುಷ್ಪಾಲಂಕಾರ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಸೇರಿದಂತೆ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತಾದಿಗಳು ಕದಂಬ ನದಿಯಲ್ಲಿ ಮಿಂದು ಗಂಗಾ ಪೂಜೆ ನೆರವೇರಿಸಿದರು.

ನಂತರ ಸರತಿ ಸಾಲಿನಲ್ಲಿ ನಿಂತು ಶ್ರೀವೈದ್ಯನಾಥೇಶ್ವರ ಸ್ವಾಮಿ ದರ್ಶನ ಪಡೆದು ಧನ್ಯತಾ ಭಾವಮೆರೆದರು. ದೇವರ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಶ್ರೀಪ್ರಸನ್ನ ಪಾರ್ವತಂಬ ವೈದ್ಯನಾಥೇಶ್ವರ ಟ್ರಸ್ಟ್‌ನಿಂದ ದಾನಿಗಳ ನೆರವಿನಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಪಟ್ಟಣದ ಹಳೆ ಬಸ್ ನಿಲ್ದಾಣದ ಶ್ರೀಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಕಡೇ ಕಾರ್ತಿಕ ಮಾಸದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಮುಂಜಾನೆ ಸಾಮೂಹಿಕ ರುದ್ರ ಹೋಮ, ರುದ್ರಾಭಿಷೇಕ, ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ಮೂಲ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ ಹಾಗೂ ದೇವಾಲಯದ ಪ್ರಾಂಗಣದಲ್ಲಿರುವ ಶ್ರೀ ವಿನಾಯಕ ದೇವರಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಕಾರ್ತಿಕ ಮಾಸದ ಕೊನೆ ದಿನದ ಅಂಗವಾಗಿ ಸೋಮನಹಳ್ಳಿ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನ ಕೊಪ್ಪ ಆಬಲವಾಡಿ ಗ್ರಾಮದ ತೋಪಿನ ತಿಮ್ಮಪ್ಪ ದೇಗುಲ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳೊಂದಿಗೆ ಸಂಜೆ ದೀಪ ಅಲಂಕಾರ ಮಾಡಲಾಗಿತ್ತು.

ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಹಲಗೂರು:

ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಹೋಬಳಿಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಹಲಗೂರಿನ ವಿದ್ಯಾಗಣಪತಿ ದೇವಸ್ಥಾನ ಸೇರಿದಂತೆ ನಡುಕೇರಿ ವೀರಭದ್ರಸ್ವಾಮಿ, ಮುತ್ತತ್ತಿ ರಸ್ತೆಯ ಸೋಮೇಶ್ವರ ಸ್ವಾಮಿ, ಗ್ರಾಮದೇವತೆ ಪಟ್ಟಲದಮ್ಮ, ಶಂಭುಲಿಂಗೇಶ್ವರ, ಕಾಳಿಕಾಂಬ, ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನಗಳಲ್ಲಿ ಸೋಮವಾರ ಕಡೇ ಕಾರ್ತಿಕ ಮಾಸದ ಅಂಗವಾಗಿ ದೇವರ ಮೂರ್ತಿಗೆ ವಿಶೇಷವಾಗಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕಗಳನ್ನು ನಡೆಸಿ ವಿವಿಧ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜಾ ನಡೆಸಲಾಯಿತು.

ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನದ ಬಸಪ್ಪನಿಗೆ ಸೇಬು, ಮೂಸಂಬಿ, ಸಿಬಿ ಕಾಯಿ, ಕಲ್ಲಂಗಂಡಿ ಹಣ್ಣು ಸೇರಿದಂತೆ ಇತರ ಹಣ್ಣುಗಳಿಂದ ಅಲಂಕರಿಸಿರುವುದು ವಿಶೇಷವಾಗಿತ್ತು. ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಇಷ್ಟಾರ್ಥವನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ದೇವರಿಗೆ ಪೂಜೆ ಸಲ್ಲಿಸಿ ಪುನೀತರಾದರು. ಮತ್ತು ಮಹಾಮಂಗಳಾರತಿ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಯೋಗಿಸಲಾಯಿತು.