ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ಮದ್ದೂರು ತಾಲೂಕು ಆಡಳಿತ ವೈಫಲ್ಯ; ಸಿಎಂಗೆ ದೂರು: ಡಾ.ಕೆ.ಎಸ್.ರಾಜಣ್ಣ

| Published : Sep 18 2024, 01:51 AM IST

ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ಮದ್ದೂರು ತಾಲೂಕು ಆಡಳಿತ ವೈಫಲ್ಯ; ಸಿಎಂಗೆ ದೂರು: ಡಾ.ಕೆ.ಎಸ್.ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕರ್ಮ ಸೆ.17ರಂದು ಆಚರಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ತಾಲೂಕು ಆಡಳಿತದ ಅಧಿಕಾರಿಗಳು ರಾಜಕೀಯ ಉದ್ದೇಶದಿಂದ ದಿನಾಂಕ ಬದಲಾವಣೆ ಮಾಡಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಶ್ವಕರ್ಮ ಜಯಂತಿ ಆಚರಣೆ ವಿಚಾರದಲ್ಲಿ ತಾಲೂಕು ಆಡಳಿತದ ವೈಫಲ್ಯ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡುವುದಾಗಿ ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಮಂಗಳವಾರ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ತಾಲೂಕು ಘಟಕದಿಂದ ನಡೆದ 9ನೇ ವರ್ಷದ ವಿಶ್ವಕರ್ಮ ಜಯಂತೋತ್ಸವದಲ್ಲಿ ಮಾತನಾಡಿ, ವಿಶ್ವಕರ್ಮ ಸೆ.17ರಂದು ಆಚರಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ತಾಲೂಕು ಆಡಳಿತದ ಅಧಿಕಾರಿಗಳು ರಾಜಕೀಯ ಉದ್ದೇಶದಿಂದ ದಿನಾಂಕ ಬದಲಾವಣೆ ಮಾಡಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಂಘಟನೆಯಲ್ಲಿ ಎರಡು ಗುಂಪುಗಳು ಇದ್ದು, ಈ ಗುಂಪಿನ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಥವಾ ಪೂರ್ವಭಾವಿ ಸಭೆ ಕರೆದು ಚರ್ಚೆ ನಡೆಸದೆ ಅಧಿಕಾರಿಗಳು ಒಂದು ಗುಂಪಿನ ಜನರನ್ನು ಓಲೈಸುವ ದೃಷ್ಟಿಯಿಂದ ಮತ್ತೊಂದು ಗುಂಪನ್ನು ಕಡೆಗಣಿಸಿ ಇಂದು ಜಯಂತಿಯನ್ನು ಬೀದಿಯಲ್ಲಿ ಆಚರಿಸುವಂತಹ ಪರಿಸ್ಥಿತಿಗೆ ತಂದೊಡ್ಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಆದೇಶದ ಪ್ರಕಾರ ಸೆ.17ರಂದು ವಿಶ್ವಕರ್ಮ ಜಯಂತಿ ಆಚರಿಸುವುದು ನಿಯಮ. ಆದರೆ, ಅಧಿಕಾರಿಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಇಡೀ ಜನಾಂಗಕ್ಕೆ ಅಗೌರವ ತೋರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸುವುದಾಗಿ ಕಾರ್ಯಕ್ರಮದ ನಂತರ ಸುದ್ದಿಗಾರರಿಗೆ ತಿಳಿಸಿದರು.

ವಿಶ್ವಕರ್ಮ ಸಮಾಜದ ಜಿಲ್ಲಾ ಉಸ್ತುವಾರಿ ತೈಲೂರು ಆನಂದಾಚಾರಿ, ವಿರಾಟ್ ವಿಶ್ವಕರ್ಮ ಯುವಕರ ಸಂಘದ ಅಧ್ಯಕ್ಷ ಬಸವಚಾರಿ ಇದ್ದರು.

ರಾಜಕೀಯ ಸ್ಥಾನಮಾನ ನೀಡದೆ ವಿಶ್ವಕರ್ಮ ಸಮುದಾಯ ಕಡೆಗಣನೆ: ಡಾ.ಕೆ.ಎಸ್.ರಾಜಣ್ಣ

ಮದ್ದೂರು:

ವಿಶ್ವಕರ್ಮ ಸಮುದಾಯದ ನೈಜ ನಾಯಕರಿಗೆ ರಾಜ್ಯ ಸರ್ಕಾರ ಯಾವುದೇ ರಾಜಕೀಯ ಸ್ಥಾನಮಾನಗಳನ್ನು ನೀಡದೆ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದು ವಿಶ್ವಕರ್ಮ ಸಮುದಾಯದ ಮುಖಂಡ, ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಗಂಭೀರ ಆರೋಪ ಮಾಡಿದರು.

ಪಟ್ಟಣದ ತಾಲೂಕ ಕಚೇರಿ ಆವರಣದಲ್ಲಿ ಸಂಘಟನೆ ಮುಖಂಡರೊಂದಿಗೆ ಮಾತುಕತೆ ನಡೆಸಿದ ಅವರು, ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ನಡೆಸಲು ಅಣಿಯಾಗಬೇಕು ಎಂದರು.

ನಾನು ವಿಕಲಚೇತನ ಕ್ರೀಡಾಪಟುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತನಾಗಿದ್ದೇನೆ. ನನಗೂ ಸಹ ರಾಜಕೀಯ ಸ್ಥಾನಮಾನ ದೊರಕಬೇಕೆಂಬ ಅಭಿಲಾಷೆ ಹೊಂದಿದ್ದೇನೆ. ಸರ್ಕಾರ ವಿಧಾನ ಪರಿಷತ್‌ಗೆ ಮೂರು ಸ್ಥಾನಗಳನ್ನು ಖಾಲಿ ಇದ್ದ ವೇಳೆ ಒಂದು ಸ್ಥಾನವನ್ನು ವಿಶ್ವಕರ್ಮ ಸಮಾಜದ ನಾಯಕರಿಗೆ ನೀಡಬೇಕಾಗಿತ್ತು. ಆದರೆ, ಸಮಾಜಕ್ಕೆ ಯಾವುದೇ ಕೊಡುಗೆ ಇಲ್ಲದ ಕಳ್ಳ ಕಾಕರಿಗೆ ಪರಿಷತ್ ಸ್ಥಾನ ನೀಡಿ ಸಮಾಜದ ಜನತೆಗೆ ಕುಂದು ಉಂಟು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆಳುವ ಸರ್ಕಾರಗಳು ಇನ್ಮುಂದಾದರು ಎಚ್ಚೆತ್ತುಕೊಂಡು ವಿಶ್ವಕರ್ಮ ಜನಾಂಗದ ಸಮಸ್ಯೆಗಳಿಗೆ ಸ್ಪಂದಿಸುವಂತಹ ವ್ಯಕ್ತಿಗಳಿಗೆ ರಾಜಕೀಯ ಸ್ಥಾನಮಾನ ನೀಡುವುದು ಅಗತ್ಯ ಎಂದು ಸಲಹೆ ನೀಡಿದರು.