ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರು ಉತ್ಸವವನ್ನು ಮುಂದಿನ ವರ್ಷದಿಂದ ರಾಜ್ಯ ಮಟ್ಟದ ಉತ್ಸವವನ್ನಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಬಳಿಯಿಂದ ಶಿವಪುರದ ಸತ್ಯಾಗ್ರಹ ಸೌಧದ ವರೆಗೆ ಮದ್ದೂರು ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿ, ಮದ್ದೂರು ಕೇವಲ ಭೌಗೋಳಿಕ ಗಡಿಯಲ್ಲ. ಇದು ತ್ಯಾಗರಾಜರ ನಾಡು. ಇತಿಹಾಸದ ಪುಟಗಳಲ್ಲಿ ದಾಖಲಾದ ಪುಣ್ಯಭೂಮಿ ಎಂದು ಶ್ಲಾಘಿಸಿದರು.
ಮುಂದಿನ ದಿನಗಳಲ್ಲಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಕ್ರಮ ವಹಿಸುವ ಜೊತೆಗೆ ಸ್ಥಳೀಯ ಕಲಾವಿದರಿಗೆ ಶಾಶ್ವತ ವೇದಿಕೆ ನಿರ್ಮಿಸಲು 2 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗುವುದು. ನಮ್ಮ ಜಾನಪದ, ಕಲೆ, ಕೃಷಿ ಸಂಸ್ಕೃತಿಯನ್ನು ಜಗತ್ತಿಗೆ ಸಾರಲು ಉತ್ಸವಗಳು ಸೇತುವೆಯಾಗಬೇಕು. ಸಂಸ್ಕೃತಿ ಉಳಿಸಿ ಬೆಳೆಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದರು.ಮದ್ದೂರು ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು. ರೈತರಿಲ್ಲದೆ ಉತ್ಸವವಿಲ್ಲ. ಕೃಷಿ ಮೇಳದ ಮೂಲಕ ನಮ್ಮ ಅನ್ನದಾತರಿಗೆ ಹೊಸ ತಂತ್ರಜ್ಞಾನ ಪರಿಚಯಿಸುತ್ತಿದ್ದೇವೆ. ಯುವಕರು ಕೃಷಿಯತ್ತ ಒಲವು ತೋರಿಸಬೇಕು ಎಂದರು.
ಈ ವೇಳೆ ಜಾನಪದ ಕಲಾವಿದೆ ಲಕ್ಷ್ಮಮ್ಮ, ಕೃಷಿ ಸಾಧಕ ಪುಟ್ಟಸ್ವಾಮಿ ಸೇರಿದಂತೆ 15 ಸಾಧಕರನ್ನು ಸಚಿವರು ಸನ್ಮಾನಿಸಿದರು. ಶಾಲಾ ಮಕ್ಕಳ ‘ಕಾವೇರಿ ಆರತಿ’ ನೃತ್ಯರೂಪಕ ಪ್ರೇಕ್ಷಕರ ಮನಗೆದ್ದಿತು. ಸಮಾರಂಭದಲ್ಲಿ ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಶೋಭರಾಣಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಹಸೀಲ್ದಾರ್ ಪರಶುರಾಮ್ ಸತ್ತೀಗೇರಿ, ನಗರಸಭೆ ಆಯುಕ್ತೆ ರಾಧಿಕಾ ಸೋಮಶೇಖರ್, ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್ , ಮುಖಂಡರಾದ ಕೆ.ಎಂ.ರವಿ, ಹೊಂಬಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.