ಬಳ್ಳಾರಿ ಜೀನ್ಸ್‌ಗೆ ಜಾಗತಿಕ ಮಟ್ಟದಲ್ಲಿ ಮೇಡ್‌ ಇನ್‌ ಇಂಡಿಯಾ ಸ್ಥಾನಮಾನ: ನರೇಂದ್ರ ಮೋದಿ

| Published : Apr 29 2024, 01:37 AM IST / Updated: Apr 29 2024, 02:26 PM IST

ಬಳ್ಳಾರಿ ಜೀನ್ಸ್‌ಗೆ ಜಾಗತಿಕ ಮಟ್ಟದಲ್ಲಿ ಮೇಡ್‌ ಇನ್‌ ಇಂಡಿಯಾ ಸ್ಥಾನಮಾನ: ನರೇಂದ್ರ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದಲ್ಲಿ ಜೀನ್ಸ್‌, ಮತ್ತು ಉಕ್ಕು ಉದ್ಯಮ, ಕೃಷಿ ವಲಯದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿದೆ.

ಹೊಸಪೇಟೆ: ಬಳ್ಳಾರಿ ಜೀನ್ಸ್‌ ಜಾಗತಿಕ ಮಟ್ಟದಲ್ಲಿ "ಮೇಡ್‌ ಇನ್‌ ಇಂಡಿಯಾ " ಎಂದು ಸ್ಥಾನಮಾನ ಲಭಿಸುವಂತೆ ಮಾಡಲಾಗುವುದು. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಜೀನ್ಸ್‌ ಉದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಗರದ ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಬಳ್ಳಾರಿ, ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿದ ಅವರು, ಈ ಭಾಗದಲ್ಲಿ ಜೀನ್ಸ್‌, ಮತ್ತು ಉಕ್ಕು ಉದ್ಯಮ, ಕೃಷಿ ವಲಯದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿದೆ. ಇದರಿಂದ ಈ ಭಾಗದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಇದಕ್ಕಾಗಿ ಕ್ರಮ ವಹಿಸಲಾಗುವುದು ಎಂದರು.

ಈ ಭಾಗದಲ್ಲಿ ಸಾರಿಗೆ, ಸಂಪರ್ಕ ವಲಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಿವೆ. ಅದರಲ್ಲೂ ರೈಲ್ವೆ ಕಾಮಗಾರಿಗಳು ನಡೆದಿವೆ. ರಾಯಚೂರು, ಗಿಣಿಗೇರಾ, ಗದ್ವಾಲ್‌ ರೈಲ್ವೆ ಕಾಮಗಾರಿಯೂ ನಡೆಸಲಾಗಿದೆ. ನಾವು ಅಭಿವೃದ್ದಿಗೆ ಉತ್ತೇಜನ ನೀಡಿದ್ದೇವೆ. ಜವಳಿ ಉದ್ಯಮಕ್ಕೂ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಸಾಲಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಕೊಪ್ಪಳದ ಆಟಿಕೆ ಜಾಗತಿಕ ಮಟ್ಟಕ್ಕೆ:

ಈ ಹಿಂದೆ ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಮೋದಿ ಸರ್ಕಾರ ಬಂದ ಬಳಿಕ ಆಟಿಕೆಗಳ ಉದ್ಯಮಕ್ಕೆ ಉತ್ತೇಜನ ನೀಡಲಾಯಿತು. ಕೊಪ್ಪಳದ ಆಟಿಕೆಗಳಿಗೆ ಈಗ ಹೊರ ದೇಶಗಳಲ್ಲೂ ಭಾರೀ ಬೇಡಿಕೆ ಇದೆ. ಇದರಿಂದ ನಮ್ಮ ದೇಶದಲ್ಲಿ ಉತ್ಪಾದನೆ ಆಗುವ ಆಟಿಕೆಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಆಮದು ಮಾಡಿಕೊಳ್ಳುವ ಪ್ರಕ್ರಿಯೆ ತಗ್ಗಿದೆ ಎಂದರು.

ಸಂಪತ್ತಿನಲ್ಲಿ ಶೇ.55 ಪಡೆಯಲು ಆಲೋಚನೆ:

ಒಂದು ವೇಳೆ ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ನೀವು ಗಳಿಸಿದ ಆಸ್ತಿ, ಸಂಪತ್ತಿನಲ್ಲಿ ನಿಮ್ಮ ಬಳಿಕ ಮಕ್ಕಳಿಗೆ ವರ್ಗಾವಣೆ ಮಾಡುವಾಗ ಶೇ.55ರಷ್ಟನ್ನು ಕಾಂಗ್ರೆಸ್‌ ಸರ್ಕಾರವೇ ಪಡೆಯಲು ಆಲೋಚಿಸಿದೆ. ಶೇ.45 ನಿಮ್ಮ ಮಕ್ಕಳಿಗೆ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕೆ ಮೋದಿ ಅವಕಾಶ ನೀಡುವುದಿಲ್ಲ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮ ಚಿನ್ನಾಭರಣ, ಸಂಪತ್ತು, ಆಸ್ತಿಯನ್ನು ಎಕ್ಸರೇ ಮಾಡಲಿದೆ. ನಿಮ್ಮ ಚಿನ್ನಾಭರಣ ಅವರ ವೋಟ್‌ ಬ್ಯಾಂಕ್‌ಗೆ ಹಂಚಿಕೆ ಮಾಡಲಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.

ಪ್ರಗತಿಯತ್ತ ದಾಪುಗಾಲು:

ದೇಶ ಈಗ ಪ್ರಗತಿಯತ್ತ ವೇಗವಾಗಿ ದಾಪುಗಾಲು ಹಾಕುತ್ತಿದೆ. ಆದರೆ, ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಹಿಡಿದರೆ, ನೀವು ತಿನ್ನಿ, ನಾವು ತಿನ್ನುತ್ತೇವೆ ಎಂಬ ಜಾಯಮಾನಕ್ಕೆ ಕಟಿಬೀಳುತ್ತಾರೆ. ಮೋದಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ದುರ್ಬಲ ಸರ್ಕಾರ ಇದ್ದಷ್ಟು, ಭ್ರಷ್ಟಾಚಾರ ಹೆಚ್ಚಿಗೆ ಇರುತ್ತದೆ. ಈ ದೇಶಕ್ಕೆ ಪುಕ್ಕಲು ನಾಯಕನ ಅವಶ್ಯಕತೆ ಇಲ್ಲ. ಧೈರ್ಯಶಾಲಿ ನಾಯಕನ ಅವಶ್ಯಕತೆ ಇದೆ. ಹಾಗಾಗಿ ನಾವು ಕಾಶ್ಮೀರದಲ್ಲಿ 370 ವಿಧಿ ರದ್ದುಪಡಿಸಿದೇವು. ಈಗ ಕಾಶ್ಮೀರಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪ್ರವಾಸೋದ್ಯಮ ಬೆಳೆದಿದೆ ಎಂದರು.

ದೇಶಕ್ಕೆ ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ. ಕಾಂಗ್ರೆಸ್‌ ಇದಕ್ಕೂ ಅಡ್ಡಗಾಲು ಹಾಕಿತ್ತು. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಆಶಯವನ್ನು ನಾವು ಈಡೇರಿಸಿದ್ದೇವೆ. ಕಾಶ್ಮೀರದಲ್ಲೂ ದಲಿತರಿಗೆ ಮೀಸಲಾತಿ ನೀಡಿದ್ದೇವೆ. ದೇಶಕ್ಕೆ ಒಂದು ಸಂವಿಧಾನ, ಕಾಶ್ಮೀರಕ್ಕೆ ಇನ್ನೊಂದು ಸಂವಿಧಾನ ಇತ್ತು. ಆದರೆ, ನಾವು ಈಗ ಡಾ.ಬಾಬಾಸಾಹೇಬ್‌ರ ಸಂವಿಧಾನವನ್ನು ಕಾಶ್ಮೀರದಲ್ಲೂ ಅನುಷ್ಠಾನಗೊಳಿಸಿದ್ದೇವೆ ಎಂದರು.