ಮಧುಗಿರಿ ಭೂ ಮಾಫಿಯಾ ಕಣ್ಣು ಕೊರಟಗೆರೆ ಮೇಲೆ

| Published : Nov 17 2025, 12:30 AM IST

ಸಾರಾಂಶ

ರಾತ್ರಿ ಹನ್ನೊಂದ ಆದರೆ ಸಾಕು ಸಾಲು ಸಾಲು ಲಾರಿಗಳು ಮಣ್ಣನ್ನು ಹೊತ್ತುಕೊಂಡು ರೋಡಿಗಿಳಿಯುತ್ತಿದ್ದು, ಹಗಲಿನಲ್ಲಿ ಇದ್ದ ಸಣ್ಣ ಸಣ್ಣ ಗುಡ್ಡಗಳು ಬೆಳಗಾಗುವಷ್ಟರಲ್ಲಿ ಮಾಯವಾಗುತ್ತಿವೆ.

ಎಚ್.ಎನ್.ನಾಗರಾಜುಕನ್ನಡಪ್ರಭ ವಾರ್ತೆ ಕೊರಟಗೆರೆ ರಾತ್ರಿ ಹನ್ನೊಂದ ಆದರೆ ಸಾಕು ಸಾಲು ಸಾಲು ಲಾರಿಗಳು ಮಣ್ಣನ್ನು ಹೊತ್ತುಕೊಂಡು ರೋಡಿಗಿಳಿಯುತ್ತಿದ್ದು, ಹಗಲಿನಲ್ಲಿ ಇದ್ದ ಸಣ್ಣ ಸಣ್ಣ ಗುಡ್ಡಗಳು ಬೆಳಗಾಗುವಷ್ಟರಲ್ಲಿ ಮಾಯವಾಗುತ್ತಿವೆ. ಆದರೂ ಸಹ ಅಧಿಕಾರಿಗಳು ಮೌನಕ್ಕೆ ಧೃತರಾಷ್ಟ್ರನಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಏತ್ತಗಾನಹಳ್ಳಿ ದಾಸರಹಳ್ಳಿ ಮಧ್ಯೆ ಇರುವ ಮದ್ದಮ್ಮನ ಬೆಟ್ಟಕ್ಕೆ ಭೂ ಮಾಫೀಯ ಕಣ್ಣು ಬಿದ್ದಿದೆ. ಮಧುಗಿರಿ ತಾಲೂಕಿನಿಂದ ಇಟಾಚಿ ಲಾರಿಗಳು ರಾತ್ರಿ ೧೧ ಗಂಟೆಯ ನಂತರ ಮದ್ದಮ್ಮ ಬೆಟ್ಟಕ್ಕೆ ಕನ್ನ ಹಾಕುತ್ತಿದ್ದಾರೆ. ಗರಗದೊಡ್ಡಿ ಸಮೀಪ ಇರುವ ಜಮೀನಿನ್ನು ಮಟ್ಟ ಮಾಡಿ ಹೆಚ್ಚಿನ ಲಾಭ ಪಡೆಯುವ ಸಲುವಾಗಿ ತಾಲೂಕಿನ ಸಣ್ಣ ಸಣ್ಣ ಬೆಟ್ಟಗಳನ್ನು ನೆಲಸಮ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಭೂ ಮಾಫಿಯಾದ ವ್ಯಕ್ತಿಗಳು ಕಲ್ಲು, ಉಬ್ಬು ತಗ್ಗು ಇರುವ ಜಮೀನನ್ನು ಕಡಿಮೆ ದರಕ್ಕೆ ಪಡೆದು ಜಮೀನಿನ ಅಕ್ಕಪಕ್ಕದಲ್ಲಿರುವ ಸಣ್ಣ ಸಣ್ಣ ಗುಡ್ಡಗಳನ್ನ ಕರಗಿಸಿ ಭೂಮಿಯನ್ನ ಸಮ ಮಾಡಿ ಕೋಟಿಗೆ ಮಾರಿ ಲಕ್ಷ ಲಕ್ಷ ಲಾಭ ಮಾಡುತ್ತಿದ್ದು, ರಾತ್ರಿ ಆದ್ರೆ ಸಾಕು ಲಾರಿ ಜೆಸಿಬಿ ಗಳು ಸದ್ದು ಮಾಡುತ್ತಿವೆ. ಆದರೂ ಸಹ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಇವರ ಜೊತೆ ಶಾಮೀಲು ಆಗಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೋಟ್ ...

ತಾಲೂಕಿನಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡಲು ಅಕ್ಕಪಕ್ಕದ ತಾಲೂಕಿನ ಭೂಗಳ್ಳರು ನಮ್ಮ ಗ್ರಾಮದ ಸುತ್ತಮುತ್ತ ಇರುವ ಬೆಟ್ಟ ಗುಡ್ಡಗಳನ್ನ ಕರಗಿಸೋಕೆ ಬರುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಗುಡ್ಡಗಳಲ್ಲಿ ನಮ್ಮ ದನ ಕರುಗಳು ಮೇವು ಮೇಯಿಸಲು ನಮ್ಮ ಪೂರ್ವಜರು ಬೆಟ್ಟಗಳ್ನು ಕಾಪಾಡಿಕೊಂಡು ಬರುತ್ತಿದ್ದರು. ಆದರೆ ಇವತ್ತು ಬೆಟ್ಟಗಳೇ ಮಾಯಾವಾಗುತ್ತಿವೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳಿ. - ನರಸಿಂಹಮೂರ್ತಿ, ಸ್ಥಳೀಯ.

ವಡ್ಡಗೆರೆ ಸಮೀಪ ಇರುವ ಮಧ್ಯಮ್ಮ ದೇವಸ್ಥಾನ ಬೆಟ್ಟದಲ್ಲಿ ನಲೆಸಿದ್ದು, ಸಾವಿರಾರು ವರ್ಷಗಳ ಪುರಾತನ ದೇವಸ್ಥಾನವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಭೂ ಮಾಫಿಯಾ ಅವರ ಕಣ್ಣು ಈ ಬೆಟ್ಟದ ಮೇಲೆ ಬಿದ್ದಿದ್ದು, ದೇವಸ್ಥಾನವನ್ನ ಉಳಿಸಬೇಕಾದ ಅಧಿಕಾರಿಗಳು ಮೌನವಾಗಿರುವುದು ಹಲವು ಅನುಮಾನ ಮೂಡಿಸುತ್ತದೆ.

ಹೆಸರು ಹೇಳಲು ಇಚ್ಛಿಸದ ವ್ಯಕ್ತಿ ವಡ್ಡಗೆರೆ ಗ್ರಾಮಸ್ಥ.