ರಾಜ್ಯಾದ್ಯಂತ ನಡೆಸುತ್ತಿರುವ ಜಾತಿ- ಜನ ಗಣತಿಯ ಪ್ರಕಾರ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿಗಧಿಪಡಿಸಬೇಕು. ಈ ಹಿಂದೆ ಅಲೆಮಾರಿಗಳಿಗೆ ಶೇ.೧ರಷ್ಟು ಮೀಸಲಾತಿಯನ್ನು ಸದಾಶಿವ ಆಯೋಗದಲ್ಲಿ ನಿಗದಿಪಡಿಸಿರುವುದನ್ನು ಸೇರ್ಪಡೆ ಮಾಡಿಕೊಂಡು ಇತರೆ ಸೇರಿಸಿ ಶೇ.೫ರಷ್ಟು ಮೀಸಲಾತಿ ನೀಡಿರುವುದು. ಈ ಸಂಬಂಧವಾಗಿ ಮೀಸಲಾತಿ ಪರಾಮರ್ಶಿಸಿ ಮಾದಿಗ ಸಮುದಾಯದವರಿಗೆ ನಿಗದಿಪಡಿಸಬೇಕು ಮತ್ತು ರಾಜಕೀಯ ರಂಗದಲ್ಲೂ ಮೀಸಲಾತಿ ಅವಕಾಶ ನಿಗದಿಪಡಿಸಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಭಾರತದ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರಿಗೆ ಶೂ ಎಸೆಯಲೆತ್ನಿಸಿದ ಘಟನೆಯನ್ನು ಜಿಲ್ಲಾ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸಿ, ಶುಕ್ರವಾರ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಜಿಲ್ಲಾ ಸ್ವಯಂ ಪ್ರೇರಿತ ಬಂದ್‌ಗೆ ಬೆಂಬಲ ನೀಡಿದೆ ಎಂದು ಹೋರಾಟ ಸಮಿತಿ ಉಸ್ತುವಾರಿ ದೇವರಾಜ್ ತಿಳಿಸಿದರು.

ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಾರ ದೆಹಲಿಯ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ತಮ್ಮ ಪೀಠದಲ್ಲಿ ಕುಳಿತು ಕರ್ತವ್ಯದಲ್ಲಿ ತೊಡಗಿದ್ದ ವೇಳೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲೆತ್ನಿಸಿ ಸರ್ವೋಚ್ಚ ನ್ಯಾಯಾಲಯ ಪೀಠಕ್ಕೆ, ಸಂವಿಧಾನಕ್ಕೆ ಹಾಗೂ ಭಾರತದ ೧೪೦ ಕೋಟಿ ಜನತೆ ಮತ್ತು ಸಾರ್ವಭೌಮತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಖಂಡಿಸಿದರು.

ಸಮಾಜದಲ್ಲಿ ಇಂದಿಗೂ ಜಾತಿ ತಾರತಮ್ಯ ಜೀವಂತ ಇದೆ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ವಿಕೃತ ಮನಸ್ಸಿನ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮ ಕೈಗೊಂಡು ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಸಂವಿಧಾನದ ಗೌರವ ಎತ್ತಿ ಹಿಡಿಯುವಂತಾಗಬೇಕೆಂದು ಆಗ್ರಹಿಸಿದರು.

ಅ.೨೫ ಪ್ರತಿಭಟನಾ ಧರಣಿ:

ಮಾದಿಗ ದಂಡೋರ ಸಮಿತಿ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರ ಮುಖಂಡ ಮಂದ ಕೃಷ್ಣ ಅವರ ನೇತೃತ್ವದಲ್ಲಿ ಈ ಹೀನಕೃತ್ಯ ಖಂಡಿಸಿ ಅ.೨೫ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ. ರಾಜ್ಯಾದ್ಯಂತ ಸಾವಿರಾರು ಮಂದಿ ಸಮುದಾಯದವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಕೋಲಾರ ಜಿಲ್ಲಾಧ್ಯಕ್ಷ ಆಲೇರಿ ಮುನಿರಾಜು ನೇತೃತ್ವದಲ್ಲಿ ಸಂವಿಧಾನ ಉಳಿವಿಗೆ ಈ ಹೋರಾಟದಲ್ಲಿ ಜಿಲ್ಲೆಯಿಂದ ನೂರಾರು ಮಂದಿ ಭಾಗವಹಿಸಲಿದ್ದಾರೆ ಎಂದರು.

ಅಪ್ರಾಪ್ತೆ ಬಾಲಕಿ ಹತ್ಯೆ ವಿರುದ್ದ ಕಠಿಣ ಕ್ರಮ:

ದೇಶದಾದ್ಯಂತ ಘಟನೆ ಖಂಡಿಸುತ್ತಿರುವ ಸಂದರ್ಭದಲ್ಲಿ ಭಾಸ್ಕರ್ ರಾವ್ ಪ್ರಕರಣ ಸಮರ್ಥಿಸಿರುವ ಹಿನ್ನೆಲೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗಿದೆ, ಮೈಸೂರಿನ ವಸ್ತುಪ್ರದರ್ಶನದ ಮುಂಭಾಗದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಅಪ್ರಾಪ್ತೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಸಾಕ್ಷಿ ಸಿಗಬಾರದೆಂಬ ಕಾಣಕ್ಕೆ ಬಾಲಕಿಯನ್ನು ಹತ್ಯೆ ಮಾಡಿದ ಪ್ರಕರಣವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಆರೋಪಿ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಮೀಸಲಾತಿ ಪರಾಮರ್ಶಿಸಲು ಒತ್ತಾಯ:

ರಾಜ್ಯಾದ್ಯಂತ ನಡೆಸುತ್ತಿರುವ ಜಾತಿ- ಜನ ಗಣತಿಯ ಪ್ರಕಾರ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿಗಧಿಪಡಿಸಬೇಕು. ಈ ಹಿಂದೆ ಅಲೆಮಾರಿಗಳಿಗೆ ಶೇ.೧ರಷ್ಟು ಮೀಸಲಾತಿಯನ್ನು ಸದಾಶಿವ ಆಯೋಗದಲ್ಲಿ ನಿಗದಿಪಡಿಸಿರುವುದನ್ನು ಸೇರ್ಪಡೆ ಮಾಡಿಕೊಂಡು ಇತರೆ ಸೇರಿಸಿ ಶೇ.೫ರಷ್ಟು ಮೀಸಲಾತಿ ನೀಡಿರುವುದು. ಈ ಸಂಬಂಧವಾಗಿ ಮೀಸಲಾತಿ ಪರಾಮರ್ಶಿಸಿ ಮಾದಿಗ ಸಮುದಾಯದವರಿಗೆ ನಿಗದಿಪಡಿಸಬೇಕು ಮತ್ತು ರಾಜಕೀಯ ರಂಗದಲ್ಲೂ ಮೀಸಲಾತಿ ಅವಕಾಶ ನಿಗದಿಪಡಿಸಬೇಕೆಂದು ಆಗ್ರಹಿಸಿದರು.

ಮಾದಿಗ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಲೇರಿ ಮುನಿರಾಜು, ಪದಾಧಿಕಾರಿಗಳಾದ ಶ್ಯಾಮ್‌ರಾಜ್, ಚಿಕ್ಕಬಳ್ಳಾಪುರ ಮಂಜುನಾಥ್, ಕೆ.ಜಿ.ಎಫ್. ಶಿವಕುಮಾರ್, ರಾಜೇಶ್, ರವಿಕುಮಾರ್, ಎನ್.ನಾಗರಾಜ್ ಇದ್ದರು.