ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಮಾದಿಗರ ಆತ್ಮ ಗೌರವ ಸಮಾವೇಶದಲ್ಲಿಮಾದಿಗರಿಗೆ ಒಳ ಮೀಸಲಾತಿಗೆ ಪ್ರಮುಖರು ಆಗ್ರಹಿಸಿದರು. ಮಾದಿಗರಿಗೆ ಒಳ ಮೀಸಲು ನೀಡುವ ಮೂಲಕ ಅವರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಕಳೆದ 26 ವರ್ಷಗಳಿಂದ ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಹೋರಾಟ ನಡೆದಿದೆ. ಅದಕ್ಕಾಗಿ 9 ಜನರ ಬಲಿದಾನವಾಗಿದೆ, ಮೀಸಲಾತಿ ಸಿಕ್ಕಿದಾಗ ಈ ಬಲಿದಾನಗಳಿಗೆ ಶಾಂತಿ ಸಿಗಲಿದೆ. ಕೊಡಗು ಜಿಲ್ಲೆಯಲ್ಲಿ ಎಂಟು ಸಾವಿರಕ್ಕೂ ಅಧಿಕ ಮಾದಿಗ ಜನಾಂಗದ ಬಂಧುಗಳಿದ್ದಾರೆ ಎಂದು ಹೇಳಿದರು.ತುಮಕೂರಿನ ಡಾ. ಲಕ್ಷ್ಮಿಕಾಂತ್ ಮಾತನಾಡಿ ಮಾದಿಗ ಜನಾಂಗ ಬಂಧುಗಳು ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಸಬಲರಾಗಬೇಕು. ಸ್ವಾತಂತ್ರ್ಯ ಬಂದು ಕಳೆದ 75 ವರ್ಷ ಕಳೆದರೂ ಇನ್ನೂ ಕೂಡ ಸಮಾಜ ಬಂದುಗಳು ಎಚ್ಚೆತ್ತುಕೊಂಡಿಲ್ಲ ಎಂದು ವಿಷಾದಿಸಿದರು.ಒಳ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿದ್ದರೂ ಒಳ ಮೀಸಲಾತಿಯ ಪರವಾಗಿದ್ದೀರಾ ಅಥವಾ ವಿರೋಧ ಇದ್ದೀರಾ ಅನ್ನುವುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸುತ್ತಿಲ್ಲ ಎಂದು ಆರೋಪಿಸಿದರು.
ಸಮಾಜದ ಬಂಧುಗಳು ಶೈಕ್ಷಣಿಕವಾಗಿ ಮುಂದುವರೆದಾಗ ಸಮಾಜ ಬಂಧುಗಳು ಎಚ್ಚೆತ್ತುಕೊಳ್ಳುತ್ತಾರೆ ಎಂಬ ಅಭಿಪ್ರಾಯಪಟ್ಟರು.ಮೈಸೂರಿನ ವಕೀಲ ಎಚ್.ಕೆ. ಭಾಗ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮಾದಿಗ ಜನಾಂಗ ಇಲ್ಲ ಎನ್ನುವ ಮಾಹಿತಿ ಇದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾದಿಗ ಸಮಾಜದ ಬಂಧುಗಳು ಇದ್ದಾರೆ. ಶೈಕ್ಷಣಿಕವಾಗಿ ಶಿಕ್ಷಣವನ್ನು ಪಡೆದಾಗ ಮಾತ್ರ ಜನಾಂಗ ಬಂಧುಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವರು, ಮಾದಿಗ ಜನಾಂಗದ ರಾಜ್ಯ ಪ್ರಮುಖರಾದ ಕೋಟೆ ಶಿವಣ್ಣ ಸಮಾವೇಶ ಉದ್ಘಾಟಿಸಿ, ಮಾದಿಗ ಜನಾಂಗ ಬಂಧುಗಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಬಲರಾಗಬೇಕು. ಮಾದಿಗ ಜನಾಂಗ ಬಂಧುಗಳಿಗೆ ಒಳ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸಿದರು.ಸಮಾವೇಶದಲ್ಲಿ ಕಗ್ಗುಂಡಿ ಶ್ರೀ ಗುರು ಹರಳಯ್ಯ ಗುರುಮಠದ ಶ್ರೀ ರುದ್ರಪ್ಪ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ಮಾಡಿದರು. ಪ್ರಮುಖರಾದ ಪಿಳ್ಳ ಮುನಿಶಾಮಪ್ಪ, ಹೂಡಿ ಮಂಜುನಾಥ್ ನಾಗೇಂದ್ರ ಅರಕಲವಾಡಿ, ಬಿ ಎನ್ ಗಂಗಾಧರಪ್ಪ ಹಾಗೂ ಇತರರು ಇದ್ದರು. ಸಮಾವೇಶದ ಅಧ್ಯಕ್ಷತೆಯನ್ನು ಮೈಸೂರಿನ ಮಾದಿಗ ಮಹಾಸಭಾದ ಅಧ್ಯಕ್ಷರಾದ ಶ್ರೀನಿವಾಸ್ ವಹಿಸಿದ್ದರು.