ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸೋಮವಾರಪೇಟೆ ಶ್ರೀ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವ ಸಂದರ್ಭ ಅಮೃತ ಸೋಮೇಶ್ವರ ಸಾಕ್ಷ್ಯ ಚಿತ್ರ ಲೋಕಾರ್ಪಣೆ ಮಾಡಲಾಯಿತುಸೋಮವಾರ ಸಂಜೆ ಸೋಮೇಶ್ವರ ದೇವಾಲಯದ ಸಭಾ ಭವನದಲ್ಲಿ ಆಯೋಜಿತ ಸಭಾ ಕಾರ್ಯಕ್ರಮದಲ್ಲಿ ಅಮೃತ ಸೋಮೇಶ್ವರ ಸಾಕ್ಷ್ಯ ಚಿತ್ರವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಲೋಕಾರ್ಪಣೆ ಮಾಡಿದರು. ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಪ್ರಮುಖರು ಹಾಜರಿದ್ದರು, ಸಾಕ್ಷ್ಯ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಪತ್ರಕರ್ತ ಅನಿಲ್ ಎಚ್.ಟಿ. ಮತ್ತು ರೀನಾ ಅನಿಲ್ ದಂಪತಿಯನ್ನು ಮಾಜಿ ಸಚಿವ ಎಂ,ಪಿ ಅಪ್ಪಚ್ಚು ರಂಜನ್, ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ, ರಾಜೇಂದ್ರ, ಸೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್, ಮಾಜಿ ಅಧ್ಯಕ್ಷ ಜಿ, ಸೋಮೇಶ್, ನಿರ್ದೇಶಕ ಎಸ್ ಡಿ ವಿಜೇತ್, ದೇವಿಬಳಗದ ಅಧ್ಯಕ್ಷೆ ರತಿ ನಂದಕುಮಾರ್ , ಚಿತ್ರಲೇಖ ಸನ್ಮಾನಿಸಿ ಗೌರವಿಸಿದರು,
ಶ್ರೀ ಸೋಮೇಶ್ವರ ದೇವಾಲಯ ಇತಿಹಾಸ, ದೇವಾಲಯ ಮಹತ್ವದ ಕುರಿತ 45 ನಿಮಿಷಗಳ ಸಾಕ್ಷ್ಯ ಚಿತ್ರ ದೇವಾಲಯಕ್ಕೆ ಸಂಬಂಧಿಸಿದಂತೆ ಭವಿಷ್ಯಕ್ಕೆ ಉತ್ತಮ ದಾಖಲೆಯಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಹೇಳಿದರು.ಅಮೃತ ಮಹೋತ್ಸವ ಸಮಾರೋಪ
ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವ ಸಮಾರೋಪ ಸಮಾರಂಭ ಸೋಮವಾರ ನಂಜಮ್ಮ ಸಮುದಾಯ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಿಸ್ವಾರ್ಥದಿಂದ ನಾನು ಮತ್ತು ಕುಟುಂಬ ಎಂಬುವುದನ್ನು ಬಿಟ್ಟು ನಾವು ಎಂದು ಕೆಲಸ ಮಾಡಿದಲ್ಲಿ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಯಾರೂ ಅತಿರೇಕಕ್ಕೆ ಒಳಗಾಗದೆ, ಸ್ವಾರ್ಥತೆ ಬಿಟ್ಟು ಕೆಲಸ ಮಾಡಿದಲ್ಲಿ ಮಾತ್ರ ಸಮಾಜಗಳ ಉದ್ಧಾರ ಸಾಧ್ಯ ಎಂದರು.
ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಬ್ರಾಹ್ಮಣ ಸಮಾಜ ಸಣ್ಣದಾದರೂ ಶಕ್ತಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ತಿಳಿಸಿದರು.ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಖ್ಯಾತ ಸಾಹಿತಿ ಹಾಗೂ ಬರಹಗಾರ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಹಿಂದೆ ದೇವಾಲಯಗಳು ಶಕ್ತಿಯ ಕೇಂದ್ರಗಳಾಗಿದ್ದವು. ಅದು ದಿನ ಕಳೆದಂತೆ ಜನರಿಂದ ಕಣ್ಮರೆಯಾಗುವ ಮೂಲಕ ವ್ಯಾಪಾರ ಕೇಂದ್ರವಾಗಿ ಪರಿವರ್ತನೆಯಾಗಿದೆ. ಸುಖದ ಉನ್ನತೀಕರಣದಿಂದ ನಮ್ಮಲ್ಲಿನ ಸಂತೋಷ ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಮುಖಂಡ ಎಂ.ಪಿ. ಅಪ್ಪಚ್ಚು ರಂಜನ್, ದಾನಿಗಳಾದ ವಿನೋದ್ ಶಿವಪ್ಪ, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಡಿ. ರಾಜೇಂದ್ರ, ಟಿ.ವಿ.1 ವ್ಯವಸ್ಥಾಪಕ ನಿರ್ದೇಶಕ ಎಚ್.ಟಿ. ಅನಿಲ್, ದೇವಿ ಬಳಗದ ಅಧ್ಯಕ್ಷೆ ರತಿ ನಂದಕುಮಾರ್, ಸಮಾಜದ ಪ್ರಮುಖರಾದ ಚಿತ್ರಕಲಾ ಜೋಷಿ, ಉದಯ್ ಈಶ್ವರನ್ ಇದ್ದರು.ಕಾರ್ಯಕ್ರಮದ ಪ್ರಯುಕ್ತ ದೇವಾಲಯದಲ್ಲಿ ನವದುರ್ಗಾ ಚಂಡಿಕಾ ಹೋಮ, ಏಕಾದಶ ರುದ್ರಹೋಮ, ಚಂಡಿಕಾ ಹೋಮ, ಕನ್ನಿಕಾ ಪೂಜೆ, ನವ ಮುತ್ತೈದೆಯರ ಬಾಗಿನ ಪೂಜೆಗಳು ವೇದ ಬ್ರಹ್ಮಶ್ರೀ ಎಂ.ವಿ. ಕೃಷ್ಣಮೂರ್ತಿ ಘನಪಾಠಿಗಳು ಮತ್ತು ಚಿತ್ರಕುಮಾರ್ ಭಟ್ ಸಮ್ಮುಖದಲ್ಲಿ ನಡೆಯಿತು. ಭಕ್ತರಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.