ಸಾರಾಂಶ
ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಪೂರ್ವ ಸಿದ್ಧತೆ ಪರಿಶೀಲನೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮುಂದಾಗಿದ್ದಾರೆ. ಬುಧವಾರ ದಸರಾ ಹಾಗೂ ದಶಮಂಟಪ ಸಮಿತಿಗಳೊಂದಿಗೆ ಪ್ರತಿ ದೇವಾಲಯಗಳಿಗೆ ಭೇಟಿ ನೀಡಿದ ಶಾಸಕ ಸಿದ್ಧತೆಗಳನ್ನು ವೀಕ್ಷಿಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಪೂರ್ವ ಸಿದ್ಧತೆ ಪರಿಶೀಲನೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮುಂದಾಗಿದ್ದಾರೆ.ಬುಧವಾರ ದಸರಾ ಹಾಗೂ ದಶಮಂಟಪ ಸಮಿತಿಗಳೊಂದಿಗೆ ಪ್ರತಿ ದೇವಾಲಯಗಳಿಗೆ ಭೇಟಿ ನೀಡಿದ ಶಾಸಕ ಸಿದ್ಧತೆಗಳನ್ನು ವೀಕ್ಷಿಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ತ್ವರಿತ ಗತಿಯಲ್ಲಿ ನಗರದ ರಸ್ತೆಗಳ ದುರಸ್ತಿ ಹಾಗೂ ಸ್ವಚ್ಛತಾ ಕಾರ್ಯ ನಿರ್ವಹಿಸಲು ನಗರ ಸಭೆಗೆ ಸೂಚನೆ ನೀಡಿದರು. ದಸರಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಾಥ್ ನೀಡಿದರು.ಕರಗ ಉತ್ಸವ ಆರಂಭವಾಗುವ ಪಂಪಿನ ಕೆರೆಗೆ ಭೇಟಿ ನೀಡಿದ ಮಂತರ್ ಅಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯ ವೀಕ್ಷಿಸಿ ಆಗಬೇಕಾಗಿರುವ ಸಿದ್ಧತೆಗಳ ಬಗ್ಗೆ ಗಮನ ಹರಿಸಿದರು.
ಪಂಪಿನ ಕೆರೆ ಆವರಣದಲ್ಲಿ ಟೈಲ್ಸ್ ಅಳವಡಿಸಿ ವಿಶಾಲ ಶಾಮಿಯಾನದ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ಅನುದಾನದ ಕೊರತೆ ಇದ್ದಲ್ಲಿ ಶಾಸಕರ ನಿಧಿಯಿಂದ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸ್ವಚ್ಚತಾ ಕಾರ್ಯಕ್ಕಾಗಿ ಹೊಸ ಜೆಸಿಬಿ ಯಂತ್ರ ಖರೀದಿಸಲು ಸೂಚನೆ ನೀಡಿದ ಅವರು, ಗೇಟಿನಿಂದ ಪೂಜಾ ನಡೆಯುವ ಸ್ಥಳದ ವರೆಗೂ ತಡೆಗೋಡೆ ನಿರ್ಮಾಣ ಹಾಗೂ ರಸ್ತೆ ಬದಿಯ ಚರಂಡಿಗೆ ಸ್ಲ್ಯಾಬ್ ಅಳವಡಿಸುವಂತೆ ನೂತನ ಕಮಿಷನರ್ ರಮೇಶ್ ಅವರಿಗೆ ನಿರ್ದೇಶನ ನೀಡಿದರು.ನಗರ ಸಭೆಯಲ್ಲಿ ಪೌರ ಕಾರ್ಮಿಕರ ಕೊರತೆ ಇರುವ ಹಿನ್ನೆಲೆ 30 ಮಂದಿ ಹೊಸ ನೌಕರರನ್ನು ನೇಮಕ ಮಾಡಿಕೊಳ್ಳುವಂತೆ ಮತ್ತು ವಿಡ್ ಕಟ್ಟರ್ ಗಳನ್ನು ತರಿಸುವಂತೆ ತಿಳಿಸಿದರು.
ಉತ್ಸವ ನಡೆಯುವ ಸಂದರ್ಭ ನಗರದ ವಿವಿಧ ಕಡೆ ಪೊಲೀಸ್ ಬಂದೋಬಸ್ತ್ ನಿಯೋಜಿಸುವ ಕುರಿತು ನಗರ ಠಾಣಾಧಿಕಾರಿ ಲೋಕೇಶ್ ಅವರಿಗೆ ನಿರ್ದೇಶನ ನೀಡಿದರು.ದಸರಾ ಸಮಿತಿ ಕಾರ್ಯಾಧ್ಯಕ್ಷರು, ದಶಮಂಟಪ ಸಮಿತಿಗಳ ಅಧ್ಯಕ್ಷರು, ದೇವಾಲಯಗಳ ಪ್ರಮುಖರು ಅಧಿಕಾರಿಗಳು ಉಪಸ್ಥಿತರಿದ್ದರು.