ಮಡಿಕೇರಿ ಕೇಂದ್ರ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಕಾರ್ಡಿಯಾಲಜಿ ಯೂನಿಟ್ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.
ಕುಶಾಲನಗರ: ಮಡಿಕೇರಿ ಕೇಂದ್ರ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಕಾರ್ಡಿಯಾಲಜಿ ಯೂನಿಟ್ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.
ಕುಶಾಲನಗರದಲ್ಲಿ ಮಾಧ್ಯಮ ಸ್ಪಂದನ ವತಿಯಿಂದ ನಡೆದ ರಕ್ತದಾನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಅಂದಾಜು 400ರಿಂದ 500 ರೋಗಿಗಳು ಚಿಕಿತ್ಸೆಗೆ ಜಿಲ್ಲೆಯಿಂದ ಇತರ ಜಿಲ್ಲೆಗಳ ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಂತ ಹಂತವಾಗಿ ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ ಎಂದರು.ಈ ಸಂದರ್ಭ ಮಾತನಾಡಿದ ಮಾಧ್ಯಮ ಸ್ಪಂದನ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ನಿಟ್ಟಿನಲ್ಲಿ ಕ್ಷೇತ್ರ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಕೋರಿದರು.
ಸೈರಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಪಿ, ಜಿನೇಶ್ ಮಾತನಾಡಿ, ತಮ್ಮ ಆಸ್ಪತ್ರೆ ಮೂಲಕ ಪತ್ರಕರ್ತರಿಗೆ ಚಿಕಿತ್ಸೆ ಸಂದರ್ಭ ರಿಯಾಯಿತಿ ಕಲ್ಪಿಸುವುದಾಗಿ ತಿಳಿಸಿದರು. ಆಸ್ಪತ್ರೆ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ಶಾಸಕರು ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಿದರು. 42 ಬಾರಿ ರಕ್ತದಾನ ಮಾಡಿದ ಮಾಧ್ಯಮ ಸ್ಪಂದನದ ಸದಸ್ಯ ವಿ.ವಿ. ಅರುಣ್ ಕುಮಾರ್ ಅವರನ್ನು ಶಾಸಕರು ಅಭಿನಂದಿಸಿದರು.