ಸಾರಾಂಶ
ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮ: ಸಿ.ರಂಗಧಾಮಪ್ಪ
ಕನ್ನಡಪ್ರಭ ವಾರ್ತೆ ಮಡಿಕೇರಿಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದಲ್ಲಿ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಚಾಲನೆ ದೊರೆಯಿತು.ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, 1-19 ವರ್ಷದೊಳಗಿನ ಮಕ್ಕಳಿಗೆ ಆಲ್‌ಬೆಂಡಜೋಲ್- 400 ಎಂಜಿ ಮಾತ್ರೆಯನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಶಾಲಾ ಮಕ್ಕಳ ಆರೋಗ್ಯ ಕಾರ್ಯಕ್ರಮದಲ್ಲಿ ಸರ್ಕಾರವು ಜಂತುಹುಳು ನಿವಾರಣಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಆರೋಗ್ಯ ಇಲಾಖೆ ವತಿಯಿಂದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳಾ ಮಾತನಾಡಿ, ಜಂತುಹುಳು ನಿವಾರಣಾ ಮಾತ್ರೆಯನ್ನು 19 ವರ್ಷದೊಳಗಿನ ಮಕ್ಕಳು ಪಡೆದುಕೊಳ್ಳಬೇಕು. ಇದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಜೊತೆಗೆ ಜೀರ್ಣಶಕ್ತಿ ಹೆಚ್ಚಿಸುತ್ತದೆ. ಹಾಗೆಯೇ ರಕ್ತಹೀನತೆ ತಡೆಯಬಹುದು ಎಂದು ಹೇಳಿದರು.ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಮಾತನಾಡಿ, ರಾಷ್ಟ್ರಾದ್ಯಂತ ಜಂತು ಹುಳು ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಆಲ್‌ಬೆಂಡಜೋಲ್- 400 ಎಂಜಿ ಮಾತ್ರೆ ನೀಡಲಾಗುತ್ತದೆ ಎಂದರು.ಕೊಡಗು ಜಿಲ್ಲೆಯಲ್ಲಿ 1-19 ವರ್ಷದೊಳಗಿನ ಮಕ್ಕಳ ಗುರಿ 1,33,794 ಆಗಿದ್ದು, ಇದರಲ್ಲಿ ಅಂಗನವಾಡಿ ಮಕ್ಕಳು 31,558, ಅಂಗನವಾಡಿಯಿಂದ ಹೊರಗುಳಿದ ಮಕ್ಕಳು 1,661, ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯಲ್ಲಿರುವ ಮಕ್ಕಳು 75,369 ಹಾಗೂ ಪದವಿ ಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು 10,059, ಡಿಗ್ರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು 8,330, ಐಟಿಐ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು 1,746 ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳು 5,071 ಇದ್ದಾರೆ ಎಂದು ಅವರು ವಿವರಿಸಿದರು.ಎನ್‌ಡಿಡಿ ಕಾರ್ಯಕ್ರಮಕ್ಕೆ ಅವಶ್ಯಕತೆಯಿರುವ ಆಲ್‌ಬೆಂಡಜೋಲ್ 400 ಎಂಜಿ ಮಾತ್ರೆಗಳನ್ನು ಈಗಾಗಲೇ ಎಲ್ಲ ಪ್ರಾ.ಆ.ಕೇಂದ್ರಗಳ ಮುಖಾಂತರ ಎಲ್ಲ ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ ಹಾಗೂ ಕಾರ್ಯಕ್ರಮ ಅನುಷ್ಠಾನಗೊಳಿಸಲು ಎಲ್ಲ ಶಾಲೆ/ ಕಾಲೇಜು ನೋಡಲ್ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಕಿ.ಮ.ಆ.ಸ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ ಎಂದರು.2023-24 ನೇ ಸಾಲಿನಲ್ಲಿ ಫೆಬ್ರವರಿ ಮತ್ತು ಮೇ ಎರಡು ಹಂತಗಳಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ನಡೆಸಲಾಗಿದ್ದು, ಕೊಡಗು ಜಿಲ್ಲೆಯು 1,34,822 ಮಕ್ಕಳ ಗುರಿಯನ್ನು ಹೊಂದಿದ್ದು, 1,34,222 ಮಕ್ಕಳಿಗೆ ಆಲ್‌ಬೆಂಡಜೋಲ್ ಗುಳಿಗೆಯನ್ನು ನೀಡಲಾಗಿದ್ದು, ಶೇ.99.55 ಪ್ರಗತಿಯನ್ನು ಸಾಧಿಸಲಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಜಿಲ್ಲಾ ಶಿಕ್ಷಣಾಧಿಕಾರಿ ಸೌಮ್ಯ ಪೊನ್ನಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಇಸಿಒ ಜಾನೆಟ್, ಕೃಷ್ಣಪ್ರಸಾದ್, ಬಿಆರ್‌ಸಿ ಗುರುರಾಜ್, ಸಂತ ಜೋಸೆಫರ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ರೋಜಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಜಿಲ್ಲಾ ಶುಶ್ರೂಷಣಾಧಿಕಾರಿ ಭವಾನಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ದೇವರಾಜು ಮತ್ತು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇತರರು ಇದ್ದರು.