ಸಾರಾಂಶ
ಕಾರ್ಯಕ್ರಮದಲ್ಲಿ ಬೆಟ್ಟಗೇರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಜಲಜಾ ಪಿ ಎಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ಲಯನ್ಸ್ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಲಯನ್ಸ್ ವಲಯಾಧ್ಯಕ್ಷ ನಟರಾಜ್ ಕೆಸ್ತೂರ್ ಅವರ ಭೇಟಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬೆಟ್ಟಗೇರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಜಲಜಾ ಪಿ.ಎಂ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಾಂತೀಯ 12, ವಲಯ 2 ರ ಅಧ್ಯಕ್ಷ ನಟರಾಜ್ ಕೆಸ್ತೂರ್, ನಮ್ಮ ಜೀವನದಲ್ಲಿ ಬರುವ ವಿವಿಧ ಹಂತಗಳ ಎಲ್ಲಾ ಗುರುಗಳನ್ನು ಗೌರವಿಸುವುದು ನಮ್ಮ ಜವಾಬ್ದಾರಿಯಾಗಬೇಕು ಎಂದರು.
ಲಯನ್ಸ್ ಸಂಸ್ಥೆ ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸುತ್ತಿರುವುದಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಶಿಕ್ಷಕಿ ಜಲಜಾ ಪಿ.ಎಂ., ನಮ್ಮಿಂದ ವಿದ್ಯೆ ಕಲಿತ ಮಕ್ಕಳು ದೊಡ್ಡ ಸ್ಥಾನಗಳಿಗೆ ಏರಬೇಕು, ಉನ್ನತ ಹುದ್ದೆಗಳಿಗೆ ಸೇರಬೇಕು ಎನ್ನುವ ಕನಸು ಪೋಷಕರಂತೆ ಶಿಕ್ಷಕರಿಗೂ ಇರುತ್ತದೆ. ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೊಡ್ಡ ಹುದ್ದೆಗಳಿಗೆ ಸೇರಿದ ನಂತರ ನಮ್ಮನ್ನು ಕಂಡು ಮಾತನಾಡಿಸುವುದೇ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.
ಸೇವೆ ಮಾಡಿದವರನ್ನು ಗುರುತಿಸುವ ವಿಶಾಲ ಮನೋಭಾವ ಎಲ್ಲರಲ್ಲೂ ಇರುವುದಿಲ್ಲ. ಲಯನ್ಸ್ ಸಂಸ್ಥೆ ಶಿಕ್ಷಕರ ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹರ್ಷದ ವಿಚಾರ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಲಯನ್ಸ್ ಸಂಸ್ಥೆ 2018 ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಮಾಡಿದ ಸೇವೆ ಅವಿಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮದನ್ ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ವಲಯದ ಪ್ರಥಮ ಮಹಿಳೆ ಶೈಲಾ ನಟರಾಜ್, ಲಯನ್ಸ್ ಕಾರ್ಯದರ್ಶಿ ಕೆ.ಮಧುಕರ್, ಖಜಾಂಚಿ ಕೆ.ಕೆ.ದಾಮೋದರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಸತೀಶ್ ರೈ ಲಯನ್ಸ್ ನೀತಿ ಸಂಹಿತೆಯನ್ನು ಓದಿದರು. ಸಂಗೀತ ಮೋಹನ್ ಧ್ವಜವಂದನೆ ಮಾಡಿದರು. ಕಮಲಾ ಮುರುಗೇಶ್ ಪ್ರಾರ್ಥಿಸಿದರು. ಮದನ್ ಮಾದಯ್ಯ ಸ್ವಾಗತಿಸಿದರು. ನವೀನ್ ಅಂಬೇಕಲ್ ವಂದಿಸಿದರು. ಚಾಮ ಹಾಗೂ ಪ್ರತಿಮಾ ರವಿ ಅತಿಥಿಗಳ ಪರಿಚಯ ಮಾಡಿದರು.