ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಸಂಘಟನೆ 27ರಂದು ಮಡಿಕೇರಿಯಲ್ಲಿ ‘ಸಂವಿಧಾನ್ ಸಮ್ಮಾನ್ ಅಭಿಯನ್’ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಘಟನೆ ಜಿಲ್ಲಾ ಸಂಚಾಲಕ ವಿ.ಕೆ.ಲೋಕೇಶ್ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ರಕ್ಷಕರು ನಾವೇ ಎಂದು ಹೇಳಿಕೊಳ್ಳುವ ಪಕ್ಷವು ಸ್ವಾತಂತ್ರ್ಯ ಪರ್ವ ಮತ್ತು ನಂತರದ ಅವಧಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದೆ ಎನ್ನುವ ವಿಚಾರಗಳನ್ನು ಜನತೆಯ ಮುಂದಿಡುವ ಉದ್ದೇಶದಿಂದ ಕಾರ್ಯಕ್ರಮ ನಡೆಸುತ್ತಿರುವುದಾಗಿ ಹೇಳಿದರು.ಅಂದು ಮಧ್ಯಾಹ್ನ 2.30 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ದಲಿತ, ಹಿಂದುಳಿದ ವರ್ಗಗಳ ಸಂಘಟನೆಗಳ ಸಹಕಾರದೊಂದಿಗೆ ನಡೆಯುವ ಸಂವಿಧಾನ್ ಸಮ್ಮಾನ್ ಅಭಿಯಾನ್ ಕಾರ್ಯಕ್ರಮವನ್ನು ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಉದ್ಘಾಟಿಸಲಿದ್ದಾರೆ. ಮದೆ ಮಹದೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮೈಸೂರಿನ ಸಾಮಾಜಿಕ ನ್ಯಾಯ ವೇದಿಕೆ ಕಾರ್ಯದರ್ಶಿ ಪರಮಾನಂದ ಎಂ.ಎಸ್.ಪಾಲ್ಗೊಳ್ಳಲಿದ್ದಾರೆ. ವಿಕಾಸ್ ಪುತ್ತೂರು ರಚಿಸಿರುವ ‘ಸಂವಿಧಾನ ಬದಲಿಸಿದ್ದು ಎನ್ನುವ ಯಾರು’ ಕೃತಿ ಅನಾವರಣಗೊಳಿಸಲಾಗುವುದು ಎಂದರು.ಶೋಷಿತ ಸಮಾಜದಲ್ಲಿ ಜನಿಸಿದ್ದರೂ ಶಿಕ್ಷಣದ ಮೂಲಕ ಉನ್ನತ ಪದವಿ ಏರಿದ ಡಾ.ಬಿ.ಆರ್.ಅಂಬೇಡ್ಕರ್ ಬದುಕಿನ ರೀತಿ, ಅವರ ಬದುಕಿನಲ್ಲಿ ಯಾರೆಲ್ಲ ಅವರಿಗೆ ಅನ್ಯಾಯವೆಸಗಿದ್ದಾರೆ ಎನ್ನುವುದು ಸೇರಿದಂತೆ ಅಂಬೇಡ್ಕರ್ ಕುರಿತ ವಿವಿಧ ಸತ್ಯಾಂಶಗಳನ್ನು ಕಾರ್ಯಕ್ರಮದಲ್ಲಿ ತಿಳಿಸಲಾಗುವುದು ಎಂದರು.
ಸಂಘಟನೆ ಸದಸ್ಯ ಪಿ.ಎಂ.ರವಿ ಮಾತನಾಡಿ, ಪ್ರಧಾನಿ ಮೋದಿ 2015ರಲ್ಲಿ ‘ಸಂವಿಧಾನ ದಿನ’ವನ್ನು ಅಧಿಕೃತವಾಗಿ ಆರಂಭಿಸಿದರು. ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಮತ್ತು ಅವರು ರಾಷ್ಟ್ರಕ್ಕೆ ನೀಡಿರುವ ಸಂವಿಧಾನದ ಕುರಿತು ಅಪಪ್ರಚಾರಗಳನ್ನು ಮಾಡಲಾಗುತ್ತಿದೆ ಎಂದರು.ಸಂಘಟನೆ ಸದಸ್ಯರಾದ ಅಪ್ಪು ರವೀಂದ್ರ, ಪರಮೇಶ್ ಎಂ.ಎಂ, ಮೊಂತಿ ಗಣೇಶ್ ಹಾಗೂ ಮುಕುಂದ ಎಚ್.ಜಿ. ಇದ್ದರು.