ಮಾಗಡಿ: ಹಿಂಬಾಕಿ ಬಿಲ್ ಮಂಜೂರು ಮಾಡಲು ಸಿಬ್ಬಂದಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟು, ದಾಳಿ ವೇಳೆ ಹಣವನ್ನು ಕಿಟಕಿಯಿಂದ ಹೊರಗೆಸೆದು ತಪ್ಪಿಸಿಕೊಳ್ಳಲು ಯತ್ನಿಸಿದ ಮಾಗಡಿ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿಯ ಸಹಾಯಕ ಲೆಕ್ಕಾಧಿಕಾರಿ ಎಸ್.ಜಿ.ರವೀಂದ್ರರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ
ಮಾಗಡಿ: ಹಿಂಬಾಕಿ ಬಿಲ್ ಮಂಜೂರು ಮಾಡಲು ಸಿಬ್ಬಂದಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟು, ದಾಳಿ ವೇಳೆ ಹಣವನ್ನು ಕಿಟಕಿಯಿಂದ ಹೊರಗೆಸೆದು ತಪ್ಪಿಸಿಕೊಳ್ಳಲು ಯತ್ನಿಸಿದ ಮಾಗಡಿ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿಯ ಸಹಾಯಕ ಲೆಕ್ಕಾಧಿಕಾರಿ ಎಸ್.ಜಿ.ರವೀಂದ್ರರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಸ್ಕಾಂ ನಿವೃತ್ತ ಸಹಾಯಕ ಪವರ್ಮ್ಯಾನ್ ವಿನೋದ್ ನಾಯಕ್ ಅವರ ಹಿಂಬಾಕಿ ಬಿಲ್ ಮಂಜೂರು ಮಾಡುವ ಸಂಬಂಧ ಕಡತ ಬಾಕಿಯಿತ್ತು. ಈ ಕೆಲಸ ಮಾಡಿಕೊಡಲು ಸಹಾಯಕ ಲೆಕ್ಕಾಧಿಕಾರಿ ಎಸ್.ಜಿ.ರವೀಂದ್ರ 15,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಕೊನೆಗೆ 10,000ಕ್ಕೆ ಒಪ್ಪಂದವಾಗಿ, ಈಗಾಗಲೇ 5,000 ಮುಂಗಡವಾಗಿ ಪಡೆದಿದ್ದರು. ಉಳಿದ 5,000 ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ನೊಂದ ವಿನೋದ್ ನಾಯಕ್ ಬೆಂಗಳೂರು ದಕ್ಷಿಣ ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದರು.ಶುಕ್ರವಾರ ಬೆಳಿಗ್ಗೆ 11.10ರಲ್ಲಿ ದೂರುದಾರರಿಂದ 5,000 ಲಂಚದ ಹಣವನ್ನು ರವೀಂದ್ರ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು ಕಚೇರಿಯತ್ತ ಬರುತ್ತಿರುವುದನ್ನು ಗಮನಿಸಿದ ಆರೋಪಿ ಅಧಿಕಾರಿ, ತಕ್ಷಣವೇ ಲಂಚದ ಹಣವನ್ನು ಕಿಟಕಿಯಿಂದ ಹೊರಗೆಸೆದಿದ್ದಾರೆ. ಆದರೆ, ತಕ್ಷಣ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಅಧಿಕಾರಿಗಳು ಹಣ ವಶಪಡಿಸಿಕೊಂಡು ರವೀಂದ್ರರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸ್ನೇಹಾ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ರಾಜೇಶ್ ಕೊಟ್ಯಾನ್, ಇನ್ಸ್ಪೆಕ್ಟರ್ ಕೆ.ಎಂ.ವಿಜಯ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಸಂತ್, ವೆಂಕಟೇಶ್, ಶಿವಲಿಂಗೇಶ್, ಶಿವಕುಮಾರ್, ವಿಜಯ್, ದೀಕ್ಷಿತ್, ಪ್ರಶಾಂತ್ ಹಾಗೂ ಮೆಹಬೂಬ್ ಕಾರ್ಯಾಚರಣೆಯಲ್ಲಿದ್ದರು.