20 ಕೋಟಿ ರು. ವೆಚ್ಚದ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ನಡೆಯುತ್ತಿದೆ ಎಂದು ಆರೋಪಿಸಿ ಕೂತಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಮಾಗಡಿ ಮತ್ತು ಜಾಲಸೂರ್ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಿಂದ ನಡೆಯುತ್ತಿರುವ 20 ಕೋಟಿ ರು. ವೆಚ್ಚದ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ನಡೆಯುತ್ತಿದೆ ಎಂದು ಆರೋಪಿಸಿ ಕೂತಿ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಶಾಂತಳ್ಳಿ ಹೋಬಳಿಯ ಕೂಡು ರಸ್ತೆ, ಕಲ್ಕಂದೂರು, ಹೊಸಬೀಡು, ಕೂತಿ ಮಾರ್ಗವಾಗಿ ಹಾಸನ ಜಿಲ್ಲೆಗೆ ಸಂಪರ್ಕ ಇರುವ ಈ ರಸ್ತೆ ಹತ್ತಾರು ಗ್ರಾಮದ ಹಲವು ವರ್ಷಗಳ ಕನಸಾಗಿದೆ, ಈ ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷ ಮುಗಿಯುತ್ತ ಬಂದರು ಇನ್ನು ಪೂರ್ಣ ಗೊಂಡಿಲ್ಲ. ಗುತ್ತಿಗೆದಾರ ಗುದ್ದಲಿ ಪೂಜೆಗೆ ಬಂದ ನಂತರ ಒಂದು ವರ್ಷವಾದರು ಈ ಕಡೆ ತಿರುಗಿ ನೋಡಿಲ್ಲ. ಎಲ್ಲಾ ಗ್ರಾಮದ ಗ್ರಾಮಸ್ಥರು ಇವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತ ಬಂದಿದ್ದೇವೆ. ಆದರೆ, ಇವರಿಂದ ಗುಣಮಟ್ಟದ ಕೆಲಸ ನಡೆಯುತ್ತಿಲ್ಲ ಎಂದು ಗ್ರಾಮದ ಉಪಾಧ್ಯಕ್ಷ ಕೆ ಡಿ ಗಿರೀಶ್ ದೂರಿದರು.ಕೂತಿ ಗ್ರಾಮದ ದಿವಾಕರ್ ಮಾತನಾಡಿ, ಗುತ್ತಿಗೆದಾರ ದಿನೇಶ್ ಬಹುತೇಕ ಕಡೆ ಕಳಪೆ ಕಾಮಗಾರಿ ಮಾಡಿರುವುದು ಕಂಡು ಬಂದಿದೆ, ಇಲ್ಲಿಯೂ ಕಳಪೆ ಕಾಮಗಾರಿ ನಡೆಸಲು ಮುಂದಾಗಿದ್ದಾರೆ, ಇವರ ಜೊತೆಗೆ ಅಧಿಕಾರಿಗಳು ಷಾಮಿಲಾಗಿದ್ದಾರೆ. ಕಲ್ಲು ಕೋರೆಯಲ್ಲಿ ಬರುವ ವೇಸ್ಟ್ ಜಲ್ಲಿ ಪುಡಿಯನ್ನು ವೇಟ್ ಮಿಕ್ಸ್ ಎಂದು ರಸ್ತೆಗೆ ಹಾಕುತ್ತಿದ್ದಾರೆ. ರಸ್ತೆ ಬದಿಯಲ್ಲಿ ಎಲೆಕ್ಟ್ರಿಕ್ ಕಂಬಗಳನ್ನು ತೆರವುಗೊಳಿಸಿಲ್ಲ. ಮರಗಳನ್ನು ತೆಗೆದಿಲ್ಲ. ಎಲ್ಲಾ ಕಡೆ ಅಗಲೀಕರಣ ಆಗಿಲ್ಲ. ಒಟ್ಟಾರೆ ಅಧಿಕಾರಿಗಳು ಮತ್ತು ಗುತ್ತಿಗೆದಾರ ಸೇರಿ ಬೇಜವಾಬ್ದಾರಿತನದಿಂದ ಕಳಪೆ ಕಾಮಗಾರಿ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. ಈ ರಸ್ತೆಯನ್ನು ಗುಣಮಟ್ಟದ ವಸ್ತುಗಳನ್ನು ಬಳಸಿ ಸರಿಯಾದ ರೀತಿಯಲ್ಲಿ ರಸ್ತೆ ಕಾರ್ಯ ನಡೆಸದೆ ಹೋದರೆ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಸ್ಥಳದಲ್ಲಿ ಎ.ಇ.ಇ ಕುಮಾರ್, ಇಂಜಿನಿಯರ್ ಹರ್ಬಜ್, ಗ್ರಾಮಸ್ಥರಾದ ಜೈರಾಜ್, ಯಾದವ್, ಲಕ್ಷ್ಮಣ್, ಸಂಜು ಮತ್ತು ಗ್ರಾಮಸ್ಥರು ಇದ್ದರು.