ಸಾರಾಂಶ
ಹೂವಿನಹಡಗಲಿ ತಾಲೂಕಿನ ಮಾಗಳ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯುತ್ತಮ ಪಿಎಂಶ್ರೀ ಶಾಲೆ ಎಂಬ ಪ್ರಶಸ್ತಿ ಲಭ್ಯವಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ವರ್ಚುವಲ್ ಮೂಲಕ ಪ್ರದಾನ ಮಾಡಿದರು.
ಹೂವಿನಹಡಗಲಿ: ತಾಲೂಕಿನ ಮಾಗಳ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯುತ್ತಮ ಪಿಎಂಶ್ರೀ ಶಾಲೆ ಎಂಬ ಪ್ರಶಸ್ತಿ ಲಭ್ಯವಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ವರ್ಚುವಲ್ ಮೂಲಕ ಪ್ರದಾನ ಮಾಡಿದರು.
ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸರ್ಕಾರಿ ಶಾಲೆಯ ಮೂಲಕ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಆರಂಭಗೊಂಡ ಈ ಪಿಎಂಶ್ರೀ ಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕ್ರಾಂತಿಕಾರಿ ಹೆಜ್ಜೆನ್ನಿರಿಸಿದೆ. ಮೊದಲ ಹಂತದಲ್ಲೇ ಆಯ್ಕೆಯಾಗಿರುವ ಪಿಎಂಶ್ರೀ ಶಾಲೆಗೆ ಪ್ರಶಸ್ತಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅಖಿಲ ಭಾರತ ಶಿಕ್ಷಾ ಸಮಾಗಮ-2025 ವರ್ಚುವಲ್ ಕಾರ್ಯಕ್ರಮದ ಮೂಲಕ ನೀಡಿದರು. ವಿಜಯನಗರ ಜಿಲ್ಲೆಯಲ್ಲಿ ಮಾಗಳ ಶಾಲೆ ಮಾತ್ರ ಈ ಪ್ರಶಸ್ತಿಗೆ ಭಾಜನವಾಗಿದೆ.ಮಾಗಳ ಪಿಎಂಶ್ರೀ ಶಾಲೆಯಲ್ಲೇ ವರ್ಚುವಲ್ ಕಾರ್ಯಕ್ರಮವನ್ನು ಶಾಲಾ ಕೊಠಡಿಯಲ್ಲಿ ಮಕ್ಕಳು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಎ. ಕೋಟೆಪ್ಪ, ಈ ಶಾಲೆಯಲ್ಲಿ ಆಂಗ್ಲ ಭಾಷೆಯಲ್ಲಿ ಅತ್ಯುತ್ತಮ ಸಂವಹನ ನಡೆಯುತ್ತಿದೆ. ಮಕ್ಕಳಲ್ಲಿ ಸ್ಪಧಾತ್ಮಕ ಗುಣಗಳನ್ನು ಬೆಳೆಸುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ಪ್ರತಿಭೆ ಪತ್ತೆ ಹಚ್ಚುವ ಕೆಲಸ ಉತ್ತಮವಾಗಿ ನಡೆಯುತ್ತಿದೆ ಎಂದರು.ಶಾಲಾ ಮುಖ್ಯ ಶಿಕ್ಷಕ ಡಿ. ವಿರೂಪಣ್ಣ ಮಾತನಾಡಿ, ಇಡಿ ಜಿಲ್ಲೆಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಶಾಲೆಯಾಗಿದ್ದು, ಶಾಲಾ ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ನೀಡಲಾಗುತ್ತಿದ್ದು, ಪಿಎಂಶ್ರೀ ಯೋಜನೆಯ ಪ್ರತಿಯೊಂದು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಿದೆ. ಜತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶ್ರಮಿಸಲಾಗುತ್ತಿದೆ. ಆದರಿಂದ ಈ ಶಾಲೆಗೆ ಅತ್ಯುತ್ತಮ ಪಿಎಂಶ್ರೀ ಶಾಲೆ ಪ್ರಶಸ್ತಿ ಲಭಿಸಿದೆ ಎಂದರು.
ಪಿಎಂಶ್ರೀ ಯೋಜನೆಯಡಿಯಲ್ಲಿ ಶಾಲೆಯ ಪೂರ್ವ ಪ್ರಾಥಮಿಕ ತರಗತಿಗಳು, ಯೋಗ ಶಿಕ್ಷಣ, ವೃತ್ತಿ ಮಾರ್ಗದರ್ಶನ, ಸಮಾಲೋಚನೆಗಳು, ಕರಾಟೆ. ಶಿಶುಸ್ನೇಹಿ ಪೀಠೋಪಕರಣಗಳು, ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಗ್ರಂಥಾಲಯ, ಆಟದ ಮೈದಾನ ಅಭಿವೃದ್ಧಿ, ಕ್ರೀಡಾ ಸಾಮಗ್ರಿ, ಸಿರಿ ಧಾನ್ಯ, ಹಸಿರು ಶಾಲೆ ಉಪಕ್ರಮ, ವಿಜ್ಞಾನ ಹಾಗೂ ಗಣಿತ ವೃತ್ತಗಳು ಹೀಗೆ ಒಟ್ಟು 168 ಚಟುವಟಿಕೆ ಮೂಲಕ ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ ಕಲಬಾವಿ ಹಾಗೂ ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.