ಗಿರಿ ತಪ್ಪಲಿನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಹೊಗರೇಖಾನ್ ಮಠದ ಶ್ರೀ ಸಿದ್ದೇಶ್ವರಸ್ವಾಮಿಯವರ ಬ್ರಹ್ಮ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಶ್ರದ್ಧಾ ಭಕ್ತಿ, ಸಡಗರ ಸಂಭ್ರಮಗಳಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಬೀರೂರು
ಗಿರಿ ತಪ್ಪಲಿನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಹೊಗರೇಖಾನ್ ಮಠದ ಶ್ರೀ ಸಿದ್ದೇಶ್ವರಸ್ವಾಮಿಯವರ ಬ್ರಹ್ಮ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಶ್ರದ್ಧಾ ಭಕ್ತಿ, ಸಡಗರ ಸಂಭ್ರಮಗಳಿಂದ ನೆರವೇರಿತು.ಮಂಗಳವಾರ ಬೆಳಿಗ್ಗೆಯಿಂದಲೇ ಶ್ರೀಯವರಿಗೆ ಪಂಚಾಭಿಷೇಕ ಪೂಜಾ, ನೂರೆಂಟು ಅಷ್ಟೋತ್ತರ, ರಥಕ್ಕೆ ಕಳಸ ಸ್ಥಾಪನಾ ಪೂಜಾ ಮತ್ತು ನೂರೊಂದು ಎಡೆ ಸೇವೆಯನ್ನು ಭಕ್ತಿಯಿಂದ ಸಮರ್ಪಿಸಲಾಯಿತು. ಮಠದ ಸಕಲ ದೇವರಿಗೆ ಪೂಜೆ ನಂತರದಲ್ಲಿ ಶ್ರೀ ಸಿದ್ದೇಶ್ವರಸ್ವಾಮಿಯವರನ್ನು ಮಂಗಳವಾದ್ಯಗಳೊಂದಿಗೆ ರಥದ ಬಳಿಗೆ ಕರೆತರಲಾಯಿತು.
ರಥದ ದ್ವಜವನ್ನು ಒಕ್ಕಲುದಾರರಾದ ಹೋಗರೇಹಳ್ಳಿ ಸಿದ್ದಪ್ಪ ರವರು 1 ಲಕ್ಷ 50 ಸಾವಿರ ರು.ಗೆ ಕೂಗಿ ಪಡೆದು ಸ್ವಾಮಿಯವರ ಪ್ರಥಮ ಪೂಜೆಗೆ ಪಾತ್ರರಾದರು. ನಂತರ ಸಾವಿರಾರು ಭಕ್ತ ಸಮೂಹ ಜೈಕಾರಗಳೊಂದಿಗೆ ರಥವನ್ನು ಕೆಂಚರಾಯರ ಗುಡಿಯ ಬಳಿಯವರೆಗೂ ಎಳೆದು ತಂದರು.ಈ ಸಮಯದಲ್ಲಿ ಭಕ್ತರು ರಥಚಕ್ರಕ್ಕೆ ತೆಂಗಿನಕಾಯಿ ಒಡೆದು ಪೂಜೆಯನ್ನು ಸಲ್ಲಿಸಿ ಭಕ್ತಿ ಮೆರೆದರು. ತಮ್ಮ ಇಷ್ಟಾರ್ಥ ಸಿದ್ದಾರ್ಥಿಗಾಗಿ ಬಾಳೆಯ ಹಣ್ಣುಗಳನ್ನು ರಥದ ಕಳಸಕ್ಕೆ ಎಸೆಯುವುದರ ಮೂಲಕ ಹರಕೆಯನ್ನು ಸಲ್ಲಿಸಿದರು. ನಂತರದಲ್ಲಿ ಶ್ರೀವೀರಶೈವ ಭಕ್ತ ಮಂಡಳಿ ಭಕ್ತಾಧಿಗಳಿಂದ ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು.
ಬ್ರಹ್ಮ ರಥೋತ್ಸವಕ್ಕೂ ಮುನ್ನ ಕಳೆದ ನಾಲ್ಕುದಿನಗಳಿಂದಲೂ ಸಿದ್ದೇಶ್ವರಸ್ವಾಮಿಯವರಿಗೆ ನಿತ್ಯಪೂಜೆ, ಧ್ವಜಾರೋಹಣ, ರುದ್ರಾಭಿಷೇಕ, ಮದುವಣಿಗೆ ಶಾಸ್ತç, ನಂದಿವಾಹನೋತ್ಸವ, ಪಂಚಾಭಿಷೇಕ ಪೂಜೆ, ನೂರೆಂಟು ಅಷ್ಟೋತ್ತರ, ನವಿಲು ಉತ್ಸವ, ಕುದುರೆ ವಾಹನೋತ್ಸವ, ಕಲ್ಯಾಣೋತ್ಸವ, ಗಜವಾಹನೋತ್ಸವ, ಉತ್ಸವ ಮೂರ್ತಿಗೆ ಅಡ್ಡಪಲ್ಲಕ್ಕಿ ಉತ್ಸವಗಳನ್ನು ನಡೆಸಲಾಯಿತು.ಬುಧವಾರ ಮೂಲಮೂರ್ತಿಗೆ ಪಂಚಾಭಿಷೇಕ, ಅಷ್ಟೋತ್ತರ, ಓಕಳಿ, ಕಂಕಣ ವಿಸರ್ಜನೆಯೊಂದಿಗೆಯೊಂದಿಗೆ ಶ್ರೀಸಿದ್ದೇಶ್ವರಸ್ವಾಮಿಯವರ ರಥೋತ್ಸವ ಸಂಪನ್ನಗೊಳಿಸಲಾಗುವುದು.
ಶ್ರೀಸಿದ್ದೇಶ್ವರಸ್ವಾಮಿ ದೇವಸ್ಥಾನ ಮಂಡಳಿ, ಹೊಗರೇಹಳ್ಳಿ ವೀರಶೈವ ಸಮಿತಿ, ಒಕ್ಕಲುದಾರರು ಸೇರಿದಂತೆ ಸಖರಾಯಪಟ್ಟಣ, ಅರಸೀಕೆರೆ, ಬೆಂಗಳೂರು, ಶಿವಮೊಗ್ಗ, ಮೈಸೂರು, ಕಡೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಪರವಶತೆ ಮೆರೆದರು.