ಮಾಲೇಕಲ್‌ ತಿರುಪತಿಯಲ್ಲಿ ವೈಭವದ ವೈಕುಂಠ ಏಕಾದಶಿ

| Published : Jan 11 2025, 12:45 AM IST

ಸಾರಾಂಶ

ಮಾಲೇಕಲ್ ಅಮರಗಿರಿ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ದೇವಾಲಯಕ್ಕೆ ಮುಂಜಾನೆಯಿಂದಲೇ ಆಗಮಿಸಿದ ಭಕ್ತರು, ಸರದಿ ಸಾಲಿನಲ್ಲಿ ನಿಂತು ಗಜೇಂದ್ರ ಮೋಕ್ಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಗೋವಿಂದರಾಜ ಸ್ವಾಮಿಯ ದರ್ಶನ ಮಾಡಿದರು. ನಂತರ ಸ್ವಾಮಿಯ ಪಾದದ ದಿಕ್ಕಿನಲ್ಲಿ ಬರುವ ವೈಕುಂಠ ದ್ವಾರದ ಮೂಲಕ ನಿರ್ಗಮಿಸಿದರೆ ಮನದ ಇಷ್ಟಾರ್ಥ ಮಾತ್ರವಲ್ಲ, ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇರುವುದರಿಂದ ವೈಕುಂಠ ದ್ವಾರದ ಮೂಲಕ ನಿರ್ಗಮಿಸಿ ಧನ್ಯತಾ ಭಾವ ಅನುಭವಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗೋವಿಂದ, ಗೋಪಾಲ, ನಾರಾಯಣ, ಲಕ್ಷ್ಮೀ ರಮಣ, ಹೀಗೆ ಭಕ್ತರು ನಾಮಸ್ಮರಣೆ ಮಾಡುತ್ತಾ ವೈಕುಂಠ ಏಕಾದಶಿ ಪ್ರಯುಕ್ತ ತಾಲೂಕಿನ ಸುಕ್ಷೇತ್ರ ಮಾಲೇಕಲ್ ಅಮರಗಿರಿ ತಿರುಪತಿಯಲ್ಲಿ ನೆಲೆಸಿರುವ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯ ಸೇರಿದಂತೆ ನಾನಾ ವೈಷ್ಣವ ದೇವಾಲಯಗಳಿಗೆ ಆಗಮಿಸಿ ಆರಾಧ್ಯ ದೈವದ ದರ್ಶನ ಮಾಡಿ ಪುನೀತರಾದರು.

ಮಾಲೇಕಲ್ ಅಮರಗಿರಿ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ದೇವಾಲಯಕ್ಕೆ ಮುಂಜಾನೆಯಿಂದಲೇ ಆಗಮಿಸಿದ ಭಕ್ತರು, ಸರದಿ ಸಾಲಿನಲ್ಲಿ ನಿಂತು ಗಜೇಂದ್ರ ಮೋಕ್ಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಗೋವಿಂದರಾಜ ಸ್ವಾಮಿಯ ದರ್ಶನ ಮಾಡಿದರು. ನಂತರ ಸ್ವಾಮಿಯ ಪಾದದ ದಿಕ್ಕಿನಲ್ಲಿ ಬರುವ ವೈಕುಂಠ ದ್ವಾರದ ಮೂಲಕ ನಿರ್ಗಮಿಸಿದರೆ ಮನದ ಇಷ್ಟಾರ್ಥ ಮಾತ್ರವಲ್ಲ, ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇರುವುದರಿಂದ ವೈಕುಂಠ ದ್ವಾರದ ಮೂಲಕ ನಿರ್ಗಮಿಸಿ ಧನ್ಯತಾ ಭಾವ ಅನುಭವಿಸಿದರು.

ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಭಕ್ತರು ಆಗಮಿಸುವ ನಿರೀಕ್ಷೆಯಿದ್ದ ಹಿನ್ನೆಲಲ್ಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು, ದೇವಾಲಯದ ಅಭಿವೃದ್ಧಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಪೊಲೀಸರು ಮುಂಜಾಗ್ರತವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ನಗರದಿಂದ ಆನೇಕಲ್ ತಿರುಪತಿಗೆ ವಿಶೇಷವಾಗಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗಿತ್ತು.

ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ, ಶಾಸಕ ಕೆ . ಎಂ ಶಿವಲಿಂಗೇಗೌಡ ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ಲಕ್ಷ್ಮೀ ವೆಂಕಟರಮಣನ ದರ್ಶನ ಪಡೆದರು.

ಗುತ್ತಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲೂ ಸಹ ಏಕಶಿಲಾ ಮೂರ್ತಿಯಾಗಿ ನಿಂತಿರುವ ರಂಗನಾಥ ಸ್ವಾಮಿಗೆ ಮಾಡಿದ್ದ ತೋಮಾಲೆ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತಿತ್ತು. ಇಲ್ಲೂ ಸಹ ವೈಕುಂಠದ ದ್ವಾರ ವರ್ಷಕ್ಕೆ ಒಮ್ಮೆ ತೆರೆಯುವುದರಿಂದ ಗುತ್ತಿನಕೆರೆ ಗ್ರಾಮಸ್ಥರು ಮಾತ್ರವಲ್ಲ ತಾಲೂಕಿನಿಂದಲೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ರಂಗನಾಥ ಸ್ವಾಮಿಯ ದರ್ಶನ ಪಡೆದರು.

ವೈಷ್ಣವ ದೇವಾಲಯಗಳಲ್ಲಿ ಭಕ್ತರ ಪೂಜೆ:

ಬಿಳಿ ಕಲ್ಲು ರಂಗನಾಥ ಸ್ವಾಮಿ ದೇವಾಲಯ, ಹಾರನಹಳ್ಳಿ ಚನ್ನಕೇಶ್ವರನ ದೇವಾಲಯ, ಬೆಂಡೆಕೆರೆ ಸಮೀಪವಿರುವ ಓರಗಲ್ ತಿಮ್ಮಪ್ಪ ಸ್ವಾಮಿ ದೇವಾಲಯ, ಬೆಟ್ಟದಪುರದ ರಂಗನಾಥ ಸ್ವಾಮಿ ದೇವಾಲಯ ಸೇರಿ ನಗರದ ರುಕ್ಮಿಣಿ ಪಾಂಡುರಂಗ ದೇವಾಲಯ, ಪ್ರಾಚೀನ ಆಂಜನೇಯ ಸ್ವಾಮಿ ದೇವಾಲಯಗಳಲ್ಲೂ ಸಹ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.