ನಂದಿಕೇಶ್ವರದಲ್ಲಿ ನಂದಿದ ಯೋಧ ಮಾಗುಂಡಯ್ಯ

| Published : Jan 17 2025, 12:46 AM IST

ಸಾರಾಂಶ

ಬಟಾಲಿಯನ್ ಸೈನಿಕರ ಜೊತೆಗೆ ರನ್ನಿಂಗ್ ಮುಗಿಸಿ ವಾಪಸ್ ಮನೆಗೆ ಹೋಗುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದ ಯೋಧ ಮಾಗುಂಡಯ್ಯ ಚನ್ನಯ್ಯ ರೇಷ್ಮಿ ರವರ ಅಂತ್ಯಕ್ರಿಯೆ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಬಾದಾಮಿ

ಬಟಾಲಿಯನ್ ಸೈನಿಕರ ಜೊತೆಗೆ ರನ್ನಿಂಗ್ ಮುಗಿಸಿ ವಾಪಸ್ ಮನೆಗೆ ಹೋಗುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದ ಯೋಧ ಮಾಗುಂಡಯ್ಯ ಚನ್ನಯ್ಯ ರೇಷ್ಮಿ ರವರ ಅಂತ್ಯಕ್ರಿಯೆ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ರಾಜಸ್ಥಾನದಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಿ ಅಲ್ಲಿಂದ ಬುಧವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬಂದಿತ್ತು. ಬೆಳಗಾವಿಯಿಂದ ಗುರುವಾರ ಬೆಳಗ್ಗೆ ಯೋಧನ ಸ್ವಗ್ರಾಮ ತಾಲೂಕಿನ ನಂದಿಕೇಶ್ವರಲ್ಲಿ ಅಪಾರ ಜನಸ್ತೋಮದ ಕಂಬನಿ ನಡುವೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿತು. ನೆರದಿದ್ದ ಜನತೆ ದುಃಖ ಇಮ್ಮಡಿಸಿತು. ಕುಟುಂಸ್ಥರು ಸಂಬಂಧಿಕರು ಕಣ್ಣೀರ ಕೋಡಿ ಹರಿಯಿತು.

ಗ್ರಾಮದ ಕಲ್ಯಾಣ ಮಂಟಪದ ವೇದಿಕೆ ಮುಂದೆ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಗ್ರಾಮದ ಹೊಸ ಊರಿನಿಂದ ಹಳೆ ಊರಿನವರೆಗೂ ಮುಖ್ಯ ರಸ್ತೆಯಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಸರ್ಕಾರ ಹಾಗೂ ಮಿಲಿಟರಿ ಗೌರವದೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಲಾಯಿತು.

ಮಾಗುಂಡಯ್ಯನ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಪತ್ನಿ ಅಕ್ಷತಾ ಹಾಗೂ ಅವರ ತಂದೆ ಚನ್ನಯ್ಯ ರವರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಕುಟುಂಬಸ್ಥರ ದುಃಖದ ಕಟ್ಟೆಯೊಡೆಯಿತು.

ಜೈಜವಾನ್, ಜೈಕಿಸಾನ್, ವಂದೇ ಮಾತರಂ, ಮಾಗುಂಡಯ್ಯ ಅಮರ ರಹೇ, ಅಮರ ರಹೇ ಎಂಬ ಘೋಷನೆ ಕೂಗಿ ಹುತಾತ್ಮ ಮಾಗುಂಡಯ್ಯನಿಗೆ ಜನತೆ ವಿದಾಯ ಹೇಳಿದರು.

ಯೋಧ ಮಾಗುಂಡಯ್ಯ ರೇಷ್ಮಿ ಅಂತ್ಯಕ್ರಿಯೆಗೂ ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷ ಸದಾಶಿವ ಮಹಾಸ್ವಾಮೀಜಿ, ಒಪ್ಪತ್ತೇಶ್ವರ ಮಹಾಸ್ವಾಮೀಜಿ, ಮರಡಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಮುನ್ನ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಹನಮಂತ ಮಾವಿನಮರದ ಎಸ್.ಟಿ.ಪಾಟೀಲ, ಮಹೇಶ ಹೊಸಗೌಡರ, ಪಿ.ಆರ್.ಗೌಡರ, ಮಧು ಯಡ್ರಾಮಿ, ರಾಜಮಹಮ್ಮದ ಬಾಗವಾನ ತಹಸೀಲ್ದಾರ್‌ ಮಧುರಾಜ, ಎಂ.ಬಿ.ಹಂಗರಗಿ, ಮುಕ್ಕನಗೌಡ ಜನಾಲಿ, ಮಿಲಟರಿ ಅಧಿಕಾರಿ ಮಾಜಿ ಯೋಧರು, ಸೇರಿದಂತೆ ಗ್ರಾಮದ ಅಪಾರ ಜನ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಗುರುವಾರ ಶಾಲೆಗಳಿಗೆ ರಜೆ ಘೋಷಿಸಿ ಅಗಲಿದ ಯೋಧನಿಗೆ ಗೌರವ ಸೂಚಿಸಲಾಯಿತು.

ದೇಶ ಸೇವೆಗಾಗಿ ದುಡಿಯುತ್ತಿದ್ದ ನನ್ನ ಮಗ ಭಾರತಾಂಬೆ ಮಡಿಲಲ್ಲಿ ಮರಣವನ್ನಪ್ಪಿದ್ದಾನೆ. ನನಗೆ ಹೆಮ್ಮೆ ಇದೆ. ನನ್ನ ಮಗನ ಸಾವಿನ ಸುದ್ದಿ ತಿಳಿದು ಒಂದೆಡೆ ನೋವುಂಟಾದರೆ ಇನ್ನೊಂದೆಡೆ ಹೆಮ್ಮೆ ಇದೆ.

ಚನ್ನಯ್ಯ ರೇಷ್ಮಿ, ಯೋಧನ ತಂದೆ

ನನ್ನ ಪತಿ ಶತ್ರು ರಾಷ್ಟ್ರಗಳ ಜೊತೆ ಯುದ್ಧ ಮಾಡಿ ವೀರ ಮರಣ ಹೊಂದಿದ್ದರೆ ನನಗೆ ಇಷ್ಟು ನೋವಾಗುತ್ತಿರಲಿಲ್ಲ. ಆದರೆ ಬೆಳಗ್ಗೆ ರನ್ನಿಂಗ್ ಮುಗಿಸಿ ಮನೆಗೆ ವಾಪಾಸ್ ಬರುವಾಗ ಹೃದಯಘಾತವಾಗಿ ಸಾವನ್ನಪ್ಪಿರುವುದು ನನಗೆ ತಡೆದುಕೊಳ್ಳುಲು ಆಗುತ್ತಿಲ್ಲ. ನನ್ನ ಪತಿ ಬೇಕು ನನಗೆ ಉಳಿಸಿಕೊಡಿ.

ಅಕ್ಷತಾ ರೇಷ್ಮಿ, ಮೃತ ಯೋಧನ ಪತ್ನಿ