ಶತ ಶತಮಾನಗಳಿಂದ ಕನ್ನಡದಲ್ಲಿ ನಿತ್ಯವೂ ಪೂಜೆ ನಡೆಯುವ, ನೂರಾರು ವರ್ಷಗಳಿಂದ ಸದಾ ಪ್ರಜ್ವಲಿಸುತ್ತಿರುವ ನಂದಾ ದೀಪಗಳ ಖ್ಯಾತಿಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಪಟ್ಟಣದ ಶ್ರೀ ಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರ ಮಠದಲ್ಲಿ ಶುಕ್ರವಾರ ರಾತ್ರಿ ನಡೆದ ಮಹಾ ಕಾರ್ತಿಕೋತ್ಸವದ ನಿಮಿತ್ತ ಭಕ್ತರು ಪಟ್ಟಣದ ಎಲ್ಲೆಡೆ ಹಣತೆಗಳನ್ನು ಹಚ್ಚಿ ಭಕ್ತಿ-ಭಾವವನ್ನು ಮೆರೆದರು.
ಗುತ್ತಲ:ಶತ ಶತಮಾನಗಳಿಂದ ಕನ್ನಡದಲ್ಲಿ ನಿತ್ಯವೂ ಪೂಜೆ ನಡೆಯುವ, ನೂರಾರು ವರ್ಷಗಳಿಂದ ಸದಾ ಪ್ರಜ್ವಲಿಸುತ್ತಿರುವ ನಂದಾ ದೀಪಗಳ ಖ್ಯಾತಿಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಪಟ್ಟಣದ ಶ್ರೀ ಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರ ಮಠದಲ್ಲಿ ಶುಕ್ರವಾರ ರಾತ್ರಿ ನಡೆದ ಮಹಾ ಕಾರ್ತಿಕೋತ್ಸವದ ನಿಮಿತ್ತ ಭಕ್ತರು ಪಟ್ಟಣದ ಎಲ್ಲೆಡೆ ಹಣತೆಗಳನ್ನು ಹಚ್ಚಿ ಭಕ್ತಿ-ಭಾವವನ್ನು ಮೆರೆದರು.
ಕಾರ್ತಿಕೋತ್ಸವದ ಅಂಗವಾಗಿ ಮಠದಿಂದ ಪಟ್ಟಣದ ಬಸ್ ನಿಲ್ದಾಣ, ಅಂಗ್ಲಾಪುರ ಓಣಿ, ಪಂಚಾಯತಿ ಹಾಗೂ ಪೇಟೆಯವರೆಗೂ ರಸ್ತೆಗಳ ಇಕ್ಕೆಲ್ಲಗಳಲ್ಲಿ ಇಟ್ಟಿದ್ದ ಸಾಲು ಸಾಲು ದೀಪಗಳನ್ನು ಪೂಜೆ ವೇಳೆ ನೆರೆದ ಸಹಸ್ರಾರು ಭಕ್ತರು ಭಕ್ತಿಯಿಂದ ಹಚ್ಚಿದರು.ಹತ್ತಿ ಕಾಳಿನಿಂದ ಮಾಡಲಾದ ಹಣತೆಗಳು ಹೆಚ್ಚು ಪ್ರಕಾಶಮಾನವಾಗಿ ಬೆಳಗಿದರೆ, ಉಳಿದಂತೆ ಹತ್ತಿಯ ಬತ್ತಿಯ ಹಾಗೂ ಮೇಣದ ಬತ್ತಿಗಳನ್ನು ಭಕ್ತರು ಹಚ್ಚುವ ಮೂಲಕ ಮಹಾ ದೀಪೋತ್ಸವಕ್ಕೆ ಸಾಕ್ಷಿಯಾದರು.ಮಠದ ಎದುರುಗಡೆ ಇರುವ ಕಲ್ಯಾಣ ಮಂಟಪದಲ್ಲಿ ತಿರುಗುತ್ತಿದ್ದ 508 ದೀಪಗಳನ್ನು ಹೊಂದಿರುವ ದೀಪದ ಸ್ತಂಭ ದೃಶ್ಯ ಎಲ್ಲರ ಗಮನ ಸೆಳೆಯಿತು. ಅಲ್ಲದೆ ಅತ್ಯಾಕರ್ಷಕ ನೂರಾರು ಹಣತೆಗೆಳು ಎಲ್ಲರ ಆರ್ಕಷಣೆಯಾಗಿದ್ದರೆ ಸಾಲಂಕೃತ ದೀಪಗಳು ಎಲ್ಲರ ಗಮನ ಸೆಳೆದವು, ಶ್ರೀಮಠದ ನಗಾರಿ ಖಾನಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ದೃಶ್ಯ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಭಕ್ತರು ಸಾಲು ದೀಪಗಳನ್ನು ಹಚ್ಚಿದರೆ ಪಟ್ಟಣದಲ್ಲಿ ಹಲವರು ತಮ್ಮ ಮನೆಯ ಮುಂದೆ ಹಣತೆಗಳನ್ನು ಹಚ್ಚಿದ್ದು ಸಾಮಾನ್ಯವಾಗಿತ್ತು. ಹಣತೆಗಳನ್ನು ಹಚ್ಚುತ್ತಿದಂತೆಯೇ ಎಲ್ಲೆಡೆ ಹರ ಹರ ಮಹಾದೇವ...ಎಂಬ ಜೈಘೋಷ ಮುಗಿಲು ಮುಟ್ಟಿತ್ತು.ಈ ಮಹಾ ಕಾರ್ತಿಕೋತ್ಸವಕ್ಕೆ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಗದಗ ಜಿಲ್ಲೆಯ ನಗರ, ಗ್ರಾಮಾಂತರ ಪ್ರದೇಶಗಳಲ್ಲದೆ ನೆರೆಯ ರಾಣಿಬೆನ್ನೂರ, ಹಾವೇರಿ, ಬ್ಯಾಡಗಿ, ಹಾವನೂರ, ಹರಳಹಳ್ಳಿ, ಕಂಚಾರಗಟ್ಟಿ, ಬಸಾಪುರ, ನೆಗಳೂರ, ಬೆಳವಿಗಿ, ಎಂ.ಜಿ. ತಿಮ್ಮಾಪುರ, ಬೊಮ್ಮನಕಟ್ಟಿ, ಹೊಸರಿತ್ತಿ, ಅಕ್ಕೂರ, ಮರಡೂರ, ಕನವಳ್ಳಿ, ಭರಡಿ, ಕೂರಗುಂದ, ಬಳ್ಳಾರಿ ಜಿಲ್ಲೆಯ ಮೈಲಾರ, ಹೊಳಲು, ಕುರವತ್ತಿ ಸೇರಿದಂತೆ ಅನೇಕ ಊರುಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು.ಅನ್ನಸಂತರ್ಪಣೆ: ಮಹಾ ಕಾರ್ತಿಕೋತ್ಸವದ ಅಂಗವಾಗಿ ಮಧ್ಯಾಹ್ನ ಮಠದ ಪೂಜೆಯ ನಂತರ ಹೇಮಗಿರಿ ಕಲ್ಯಾಣ ಮಂಟಪದ ನೂತನ ನಿವೇಶನದಲ್ಲಿ ಆರಂಭವಾದ ನಿರಂತರ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಅನೇಕ ಮುಸ್ಲಿಂ ಬಾಂಧವರು ಕಾರ್ತಿಕೋತ್ಸವದಲ್ಲಿ ಭಾಗವಹಿಸಿ ಭಕ್ತಿ ಭಾವ ಮೆರೆಯುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು. ರಾಣಿಬೆನ್ನೂರ ತಾಲೂಕಿನ ವಿವಿಧ ಗ್ರಾಮಗಳ ಮುಸ್ಲಿಂ ಬಾಂಧವರು ತಾವು ಮಠದ ಭಕ್ತರಾಗಿದ್ದು ಪ್ರತಿ ಅಮಾವಾಸ್ಯೆ ಹಾಗೂ ಮಠದಲ್ಲಿನ ವಿಶೇಷ ಕಾರ್ಯಕ್ರಮಗಳಿಗೆ ಸದಾ ಆಗಮಿಸುತ್ತಿದ್ದು, ನಮ್ಮ ಕುಟುಂಬದ ಕೆಲವರು ಪಾದಯಾತ್ರೆ ಮೂಲಕ ಆಗಮಿಸುತ್ತಾರೆಂದು ರಾಣಿಬೆನ್ನೂರ ತಾಲೂಕಿನ ಸಂಗಾಪುರ ಹಾಗೂ ಹುಲಿಹಳ್ಳಿ ಗ್ರಾಮದ ಮುಸ್ಲಿಂ ಕುಟುಂಬದ ಸದಸ್ಯರು ತಿಳಿಸಿದರು.ಗುತ್ತಲ ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭಕ್ತರ ಕುದರಿ ಚಾಕರಿ ಸೇವೆ ಎಲ್ಲರ ಗಮನ ಸೆಳೆಯಿತು. ಅನೇಕ ಭಕ್ತರು ದೀವಿಗೆ(ಕಾಯಿ ಕೋಲ)ಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಆಗಮಿಸಿ ಶ್ರೀಮಠದ ಮುಂದೆ ಆಗಮಿಸಿದಾಗ ಎಲ್ಲಡೆ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸುಮಂಗಲೆಯರು ಆರತಿಗಳನ್ನು ಬೆಳಗಿದ್ದು ಎಲ್ಲರ ಆರ್ಕಷಣೆಯ ಕೇಂದ್ರವಾಗಿತ್ತು.