ಕೆ.ಆರ್.ಪೇಟೆ ತಾಲೂಕಿನ ಶರಣ ಶ್ರದ್ಧಾಕೇಂದ್ರ ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರರ ಮಹಾ ರಥೋತ್ಸವ ಸೋಮವಾರ ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಜನರ ಸಮ್ಮುಖದಲ್ಲಿ ನೆರವೇರಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಶರಣ ಶ್ರದ್ಧಾಕೇಂದ್ರ ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರರ ಮಹಾ ರಥೋತ್ಸವ ಸೋಮವಾರ ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಜನರ ಸಮ್ಮುಖದಲ್ಲಿ ನೆರವೇರಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೆ ದೇವರು, ಸ್ವತಂತ್ರ ಸಿದ್ದಲಿಂಗೇಶ್ವರರು ಪವಾಡ ಪುರುಷರಾಗಿದ್ದು, 12ನೇ ಶತಮಾನದಲ್ಲಿ ಗವಿಮಠದಲ್ಲಿ ಶಿವೈಕ್ಯರಾಗಿದ್ದಾರೆ. ಗವಿಮಠದಲ್ಲಿ ಶ್ರೀಗಳ ಗದ್ದುಗೆಯಿದ್ದು ಸುತ್ತಮುತ್ತಲ ಹತ್ತಾರು ಹಳ್ಳಿಗಳ ಆರಾದ್ಯದೈವಾಗಿರುವ ಸಿದ್ದಲಿಂಗೇಶ್ವರರ ರಥೋತ್ಸವವನ್ನು ಪೀಠಾಧ್ಯಕ್ಷ ಶ್ರೀಸ್ವತಂತ್ರ ಚನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಯಿತು.

ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಬೆಳಗ್ಗೆ ಶ್ರೀಕ್ಷೇತ್ರಕ್ಕೆ ಆಗಮಿಸಿ ಸಹಸ್ರ ರುದ್ರಾಭಿಷೇಕದಲ್ಲಿ ತಮ್ಮ ಪತ್ನಿ ರಮಾ ಅವರೊಂದಿಗೆ ಪಾಲ್ಗೊಂಡು ತಾಲೂಕಿನ ಜನರ ಪಾಲಿಗೆ ನೂತನ ವರ್ಷ ಚೆನ್ನಾಗಿರಲಿ ಎಂದು ಪ್ರಾರ್ಥಿಸಿದರು.

ತಾಲೂಕಿನ ಬಳ್ಳೇಕೆರೆ, ವಿಠಲಾಪುರ, ಅರಳಕುಪ್ಪೆ, ನಾಟನಹಳ್ಳಿ, ಹಳೆಯೂರು, ಯಗಚಗುಪ್ಪೆ, ಕಾಪನಹಳ್ಳಿ, ಕಾಳೇಗೌಡನಕೊಪ್ಪಲು, ಯಡಹಳ್ಳಿ, ಕಟ್ಟಹಳ್ಳಿ, ಬೂಕನಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಗಳ ರಥಕ್ಕೆ ಹಣ್ಣು ಮತ್ತು ಜವನವನ್ನು ಎಸೆಯುವ ಮೂಲಕ ಇಷ್ಠಾರ್ಥಕ್ಕೆ ಪ್ರಾರ್ಥನೆ ಸಲ್ಲಿಸಿದರು.

ದೇಗುಲಕ್ಕೆ ದೀಪಾಲಂಕಾರದ ಸೇವೆಯನ್ನು ಸಮಾಜ ಸೇವಕ ಮಲ್ಲಿಕಾರ್ಜುನ್ ನಡೆಸಿಕೊಟ್ಟಿದ್ದು ಜಾತ್ರೆ ನಡೆಯುವ ಅಷ್ಟೂ ದಿನಗಳಲ್ಲಿ ದೇಗುಲ ಮತ್ತು ಪ್ರಾಂಗಣವನ್ನು ಬೆಳಗಿಸಲಾಗುತ್ತಿದೆ. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ವಿಠಲಾಪುರದ ಡಾ.ಕೆ.ಜೆ.ದಯಾಮಣಿ ಮತ್ತು ವಿ.ಡಿ.ಮೋಹನ್ ದಂಪತಿಗಳು ನಡೆಸಿಕೊಟ್ಟರು.

ನೂರಾರು ಯುವಕರು ಜಾತ್ರೆಗೆ ಕುಟುಂಬ ಸಮೇತ ಹಾಜರಾಗಿ ಅಡ್ಡಪಲ್ಲಕ್ಕಿ ಹಾಗೂ ಮೂಲಾನುಷ್ಠಾನದ ಗವಿದರ್ಶನವನ್ನು ಕೂಡಾ ಮಾಡುವ ಮೂಲಕ ಶ್ರೀಗಳ ಕೃಪೆಗೆ ಪಾತ್ರರಾದರು. ಫೆಬ್ರವರಿ 6ರ ಶುಕ್ರವಾರ ಬಳ್ಳೇಕೆರೆ ಗ್ರಾಮಸ್ಥರಿಂದ ತೆಪ್ಪೋತ್ಸವ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ.