ದೊಡ್ಡೇರಿ ಕನ್ನೇಶ್ವರ ಆಶ್ರಮದಲ್ಲಿ ಮಹಾ ಶಿವರಾತ್ರಿ

| Published : Feb 28 2025, 12:47 AM IST

ಸಾರಾಂಶ

ಚಳ್ಳಕೆರೆ ತಾಲೂಕಿನ ದೊಡ್ಡೇರಿಯಲ್ಲಿ ಗುರುವಾರ ನಡೆದ ಶ್ರೀ ದತ್ತಾತ್ರೇಯ ಸ್ವಾಮಿಯ ಭವ್ಯವಾದ ರಥಕ್ಕೆ ಹೆಲಿಕಾಪ್ಟರ್‌ ಮೂಲಕ ಪುಪ್ಪಾರ್ಚನೆ ಮಾಡಲಾಯಿತು.

ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಪ್ಪಾರ್ಚನೆ । ಸಚಿವ ಸುಧಾಕರ್‌, ಸಂಸದ ಗೋವಿಂದ ಕಾರಜೋಳ ಭಾಗಿಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ದೊಡ್ಡೇರಿಯ ಶ್ರೀ ಕನ್ನೇಶ್ವರ ಆಶ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶಿವರಾತ್ರಿ ನಂತರ ಶ್ರೀ ದತ್ತಾತ್ರೇಯ ಸ್ವಾಮಿಯ ಭವ್ಯವಾದ ರಥೋತ್ಸವ ಸಾವಿರಾರು ಭಕ್ತರ ಜೈಕಾರದೊಂದಿಗೆ ಗುರುವಾರ ಮಧ್ಯಾಹ್ನ ಯಶಸ್ವಿಯಾಗಿ ನಡೆಯಿತು.

ರಾಜ್ಯದ ಮೂಲೆ ಮೂಲೆಯಿಂದ ಭಕ್ತಾಧಿಗಳು ಆಗಮಿಸಿ ಶ್ರೀ ದತ್ತಾತ್ರೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ರಥೋತ್ಸವ ಜರುಗಿತು.

ವಿಶೇಷವಾಗಿ ಈ ಬಾರಿ ರಥೋತ್ಸವ ಚಾಲನೆಯಾದ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಪ್ಪನಮನ ಸಲ್ಲಿಸಲಾಯಿತು. ಸುಮಾರು ಅರ್ಧ್‌ ಗಂಟೆಗಳ ಕಾಲ ಖಾಸಗಿ ಹೆಲಿಕಾಪ್ಟರ್‌ ಸುಮಾರು 10ಕ್ಕೂ ಹೆಚ್ಚು ಚೀಲಗಳಲ್ಲಿ ತಂದಿದ್ದ ಬಣ್ಣ, ಬಣ್ಣಹೂಗಳನ್ನು ರಥೋತ್ಸವ, ಶಿವನ ಮೂರ್ತಿ, ಗೋಪುರದ ಮೇಲೆ ಚೆಲ್ಲುವ ಮೂಲಕ ಆಗಮಿಸಿದ್ದ ಭಕ್ತರಿಗೆ ಸಂತಸವನ್ನುಂಟು ಮಾಡಿತು. ರಥೋತ್ಸವ ಸಮಯದಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.

ಪುಪ್ಪಾರ್ಚನೆ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಕೆಳಮಟ್ಟದಲ್ಲಿ ಹಾರಾಡಿದ ಹಿನ್ನೆಲೆಯಲ್ಲಿ ಜೋರಾಗಿ ಬೀಸಿದ ಗಾಳಿ ಭಕ್ತರನ್ನು ತಳ್ಳಿಕೊಂಡು ಹೋಯಿತು. ಹೆಲಿಕಾಪ್ಟರ್‌ ಗಾಳಿಯ ಸಂದರ್ಭದಲ್ಲೂ ಭಕ್ತರು ದೇವರಿಗೆ ಜಯಕಾರ ಹಾಕುತ್ತ ಮುಂದೆ ಸಾಗಿದರು. ರಥೋತ್ಸವದಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.

ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು. ಶಿವರಾತ್ರಿ ಹಾಗೂ ರಥೋತ್ಸವ ಹಿನ್ನೆಲೆಯಲ್ಲಿ ದೊಡ್ಡೇರಿಯ ಕನ್ನೇಶ್ವರ ಆಶ್ರಮ ಭಕ್ತರಿಂದ ತುಂಬಿತ್ತು.

ಭಕ್ತರು ರಥದ ಮುಂದೆ ಸಾಗುತ್ತಲೇ ದೇವರ ಜೊತೆಯಲ್ಲಿ ಶ್ರೀ ಸ್ವಾಮಿಗೂ ಪ್ರಣಾಮಗಳನ್ನು ಸಲ್ಲಿಸಿದರು.

ಇದೇ ಮೊಟ್ಟ ಮೊದಲ ಬಾರಿಗೆ ಹೆಲಿಕಾಪ್ಟರ್‌ ಮೂಲಕ ದೇವರ ಉತ್ಸವದ ಮೇಲೆ ಪುಪ್ಪಾರ್ಚನೆ ಸಲ್ಲಿಸಲಾಯಿತು. ಭಕ್ತರೊಬ್ಬರು ತಮ್ಮ ಅಭಿಲಾಷೆಯಂತೆ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ವಿವಿಧ ಹೂಗಳ ಸಮೇತ ಹೆಲಿಕಾಪ್ಟರ್‌ ಕಳಿಸಿದ್ದರು. ಆಕಾಶದಲ್ಲಿ ತೇಲಾಡಿದ ಹೆಲಿಕಾಪ್ಟರ್‌ ಕೆಲ ನಿಮಿಷಗಳ ನಂತರ ಕೆಳಗೆ ಇಳಿದಾಗ ಜನರು ಹಷೋದ್ಗಾರ ಹಾಕಿದರು. ದೊಡ್ಡೇರಿಯ ಎಲ್ಲಾ ದೇವಸ್ಥಾನಗಳು ಅಲಂಕೃತಗೊಂಡಿದ್ದವು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಸೇರದ ಜನರು ಹೆಲಿಕಾಪ್ಟರ್‌ ಮೂಲಕ ಉತ್ಸವ ಮೂರ್ತಿ ಮೇಲೆ ಪುಷ್ಪ ಚೆಲ್ಲುವ ದೃಶ್ಯವನ್ನು ಎಲ್ಲರೂ ಕಣ್ತುಂಬಿಕೊಂಡರು.

ಮಲ್ಲಪ್ಪ ಸ್ವಾಮಿಯ ಸೇವಾ ಕಾರ್ಯವನ್ನು ಪ್ರಶಂಸಿಸಿದ ಸಂಸದ ಗೋವಿಂದ ಎಂ.ಕಾರಜೋಳ ಅವರು, ಮೊದಲ ಬಾರಿಗೆ ಚಿತ್ರದುರ್ಗ ಸಂಸದರಾಗಿ ಅಧಿಕಾರ ವಹಿಸಿಕೊಂಡ ನಂತರ ದೊಡ್ಡೇರಿಯ ಕನ್ನೇಶ್ವರ ಆಶ್ರಮದ ಶಿವರಾತ್ರಿ ಉತ್ಸವಕ್ಕೆ ಮೊದಲ ಭೇಟಿ ನೀಡಿದ್ದರು.

ರಾಜ್ಯದಲ್ಲಿ ಹಲವಾರು ಮಠಗಳು, ಮಠಾಧೀಶರಿದ್ದು, ಗ್ರಾಮೀಣ ಭಾಗದಲ್ಲೇ ಜನಿಸಿ ಗ್ರಾಮೀಣ ಭಾಗದ ಜನರ ಕಷ್ಟ ಸುಖಗಳಿಗೆ ಪರಿಹಾರ ಹುಡುಕಿಕೊಡುವ ನಿಟ್ಟಿನಲ್ಲಿ ಶ್ರೀ ಮಲ್ಲಪ್ಪಸ್ವಾಮೀಜಿ ಅವರು ದತ್ತಾತ್ರೇಯ ಸ್ವಾಮಿಯ ಆಶೀರ್ವಾದಿಂದ ಬೃಹತ್ ಮಠವನ್ನು ಆರಂಭಿಸಿ ಸೇವಾ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಠಕ್ಕೆ ಆಗಮಿಸುವ ಭಕ್ತರು ತಮ್ಮ ಕಷ್ಟಗಳಿಗೆ ಪರಿಹಾರ ಸಿಕ್ಕಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಸರಳ, ಸಜ್ಜನ, ಮೆದು ಭಾಷಿಯಾದ ಸ್ವಾಮೀಜಿಯವರ ಕಾರ್ಯಗಳು ಎಲ್ಲರಿಗೂ ಸ್ಪೂರ್ತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಯುವ ಮುಖಂಡ ಎನ್.ಓಬಳೇಶ್, ಎಲ್‌ಐಸಿ ದುಗ್ಗಾವರ ರಂಗಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ದೊಡ್ಡೇರಿಯ ಕನ್ನೇಶ್ವರ ಆಶ್ರಮ ಶ್ರದ್ಧಾ ಭಕ್ತಿಯ ಕೇಂದ್ರ

ಶಿವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ದೊಡ್ಡೇರಿಯ ಕನ್ನೇಶ್ವರ ಆಶ್ರಮ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಕಳೆದ 30 ವರ್ಷಗಳಿಂದ ಶ್ರೀ ಮಲ್ಲಪ್ಪಸ್ವಾಮೀಜಿಯವರು ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷವೂ ಮಠದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಕೈಗೊಂಡಿದ್ದಾರೆ. ಮಠಕ್ಕೆ ಆಗಮಿಸುವ ಎಲ್ಲಾ ಭಕ್ತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದಾರೆ. ಮಲ್ಲಪ್ಪ ಸ್ವಾಮಿಯವರ ಜನಪರ ಕಾಳಜಿ ಪ್ರಶ್ನಾತೀತ ಎಂದು ಹೇಳಿದರು.