ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶುಕ್ರವಾರ ವಿವಿಧ ಬಗೆಯ ಪೂಜೆ ಪುನಸ್ಕಾರಗಳು ಮತ್ತು ಅಖಂಡ ಭಜನಾ ಕಾರ್ಯಕ್ರಮ ಸಾಂಗವಾಗಿ ಜರುಗಿದವು.ಹಬ್ಬದ ಅಂಗವಾಗಿ ಶ್ರೀಮಠವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗಿನಿಂದಲೇ ಹೋಮ ಹವನಾದಿ ಪೂಜಾ ಕೈಂಕರ್ಯಗಳು ನಡೆದವು. ಕ್ಷೇತ್ರದ ಅಧಿದೇವತೆಗಳಾದ ಶ್ರೀಗಂಗಾಧರೇಶ್ವರ ಸ್ವಾಮಿ ಹಾಗೂ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿಶೇಷ ಪೂಜೆ, ಅಭಿಷೇಕಾಧಿ ಕೈಂಕರ್ಯಗಳು ನೆರವೇರಿದವು. ಭೈರವೈಕ್ಯ ಡಾ.ಬಾಲಗಂಗಾಧರನಾಥಸ್ವಾಮಿ ಅವರ ಪಾದುಕಾಭಿಷೇಕವನ್ನು ಚುಂಚಶ್ರೀಗಳು ಸಾಂಗವಾಗಿ ನೆರವೇರಿಸಿದರು.
ಶ್ರೀಮಠದಲ್ಲಿ ಆಯೋಜಿಸಿದ್ದ ಅಖಂಡ ಭಜನೆಗೆ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಜಾನಪದ ಕಲಾವಿದರು, ಶ್ರೀಮಠದ ಸಾಧು ಸಂತರು, ವಿದ್ಯಾರ್ಥಿಗಳು, ಭಕ್ತರು ಭಜನೆಯಲ್ಲಿ ಭಾಗವಹಿಸಿದ್ದರು. ಕ್ಷೇತ್ರದಲ್ಲಿ ರಾತ್ರಿಯಿಡೀ ಅಖಂಡ ಭಜನೆ, ಶಿವನಾಮ ಸ್ಮರಣೆ ನಡೆದವು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಸಾವಿರಾರು ಭಕ್ತಾದಿಗಳು ಹಾಜರಿದ್ದು ಕಲಾವಿದರನ್ನು ಪ್ರೋತ್ಸಾಹಿಸಿದರು.ಕ್ಷೇತ್ರದ ಧಾರ್ಮಿಕ ಆಚರಣೆಯಲ್ಲಿ ಪ್ರಮುಖವಾದ ಜ್ವಾಲಾಪೀಠಾರೋಹಣವನ್ನು ಶ್ರೀಗಳು ಶುಕ್ರವಾರ ರಾತ್ರಿ ನೆರವೇರಿಸಿದರು. ಶ್ರೀಗಳು ಉಪವಾಸವಿದ್ದು, ಚಂದ್ರಮೌಳೇಶ್ವರಸ್ವಾಮಿ ದೇವಾಲಯದಲ್ಲಿ ಕುಳಿತು ಶ್ರೀ ಕಾಲಭೈರವಸ್ವಾಮಿ ಸೇರಿದಂತೆ ಶ್ರೀಕ್ಷೇತ್ರದ ದೇವತೆಗಳಿಗೆ ತ್ರಿಕಾಲ ಪೂಜೆ ನೆರವೇರಿಸಿದರು.
ಜ್ವಾಲಾಪೀಠಾರೋಹಣಕ್ಕೂ ಮೊದಲು ಶ್ರೀಗಳು ಸರ್ವಾಲಂಕಾರಭೂಷಿತರಾಗಿ ಚಿನ್ನದ ಕಿರೀಟವನ್ನು ಧರಿಸಿ ಶ್ರೀಮಠದ ವೇದ ಪಂಡಿತರು ಮತ್ತು ವಟುಗಳ ವೇದ ಘೋಷಣೆಯೊಂದಿಗೆ ಸಾವಿರಾರು ಭಕ್ತರ ನಡುವೆ ರಾಜ ಗಾಂಭೀರ್ಯದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು.ಕಾಲಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಶ್ರೀಕಾಲಭೈರವೇಶ್ವರಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪೂಜೆ ನೆರವೇರಿಸಿದರು. ನಂತರ ಮೆರವಣಿಯಲ್ಲೇ ಸಾಗಿ ಬಂದು ಶ್ರೀಮಠದ ಸಂಪ್ರದಾಯದಂತೆ ಜ್ವಾಲಾಪೀಠಕ್ಕೆ ಪೂಜೆ ನೆರವೇರಿಸಿ ಜ್ವಾಲಾಪೀಠಾರೋಹಣ ನೆರವೇರಿಸಿದರು.