ಮಹಾ ಶಿವರಾತ್ರಿ: ಕೆ.ಆರ್.ಪೇಟೆ ತಾಲೂಕಿನಾದ್ಯಂತ ಶಿವನಿಗೆ ವಿಶೇಷ ಪೂಜೆ

| Published : Mar 09 2024, 01:31 AM IST

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಾಲಯದಲ್ಲಿ ದೇವಾಲಯದ ಆವರಣದಲ್ಲಿ ಸ್ಥಾಪಿಸಿದ್ದ ಲಿಂಗಕ್ಕೆ ಭಕ್ತರಿಂದ ಅಭಿಷೇಕ, ರುದ್ರಹೋಮ, ಪೂಣಾಹುತಿ, ಮಹಾ ಮಂಗಳಾರತಿ ನಡೆದವು. ವಿವಿಧ ಪೂಜೆ ಹಾಗೂ ಕು.ನಿತ್ಯ ಅವರಿಂದ ಭರತನಾಟ್ಯ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನಾದ್ಯಂತ ವಿವಿಧ ಗ್ರಾಮಗಳ ಶಿವನ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳು ಸಡಗರ ಸಂಭ್ರಮದಿಂದ ನಡೆದವು.

ಮುಂಜಾನೆಯಿಂದಲೇ ಎಲ್ಲ ದೇವಾಲಯಗಳನ್ನು ತಳಿರುತೋರಣ, ರಂಗವಲ್ಲಿ, ಹೂವಿನ ಅಲಂಕಾರ ಮುಂತಾದವುಗಳಿಂದ ಸಿಂಗರಿಸಲಾಗಿತ್ತು, ಭಕ್ತರು ಬೆಳಗ್ಗೆಯಿಂದ ಸಂಜೆಯವರೆಗೂ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು.

ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಾಲಯದಲ್ಲಿ ದೇವಾಲಯದ ಆವರಣದಲ್ಲಿ ಸ್ಥಾಪಿಸಿದ್ದ ಲಿಂಗಕ್ಕೆ ಭಕ್ತರಿಂದ ಅಭಿಷೇಕ, ರುದ್ರಹೋಮ, ಪೂಣಾಹುತಿ, ಮಹಾ ಮಂಗಳಾರತಿ ನಡೆದವು. ವಿವಿಧ ಪೂಜೆ ಹಾಗೂ ಕು.ನಿತ್ಯ ಅವರಿಂದ ಭರತನಾಟ್ಯ ಏರ್ಪಡಿಸಲಾಗಿತ್ತು.

ಹೊಸಹೊಳಲಿನ ಕೋಟೆ ಭೈರವೇಶ್ವರ, ಹರಿಹರಪುರದ ಹರಿಹರೇಶ್ವರ, ಸಿಂಧಘಟ್ಟದ ಸಂಗಮೇಶ್ವರ, ಮೋದೂರಿನ ರಾಮಲಿಂಗೇಶ್ವರ, ಬೂಕನಕೆರೆಯ ಈಶ್ವರ, ದೊಡ್ಡಗಾಡಿಗನಹಳ್ಳಿಯ ಜೋಡಿಲಿಂಗೇಶ್ವರ, ಅಟ್ಟುಪ್ಪೆಯ ಮಲ್ಲೇಶ್ವರ, ಗವಿಮಠದ ವೀರಭದ್ರೇಶ್ವರ, ಮರುವನಹಳ್ಳಿಯ ಬಸವೇಶ್ವರ, ಮರಡಿಲಿಂಗೇಶ್ವರ, ಗೋವಿಂದನಹಳ್ಳಿ ಪಂಚಲಿಂಗೇಶ್ವರ, ಸಾಸಲು ಶಂಭುಲಿಂಗೇಶ್ವರ, ತ್ರಿವೇಣಿ ಸಂಗಮದ ಸಂಗಮೇಶ್ವರ, ಅಗ್ರಹಾರಬಾಚಹಳ್ಳಿ ಹುಣಸೇಶ್ವರ, ಜೈನ್ನಹಳ್ಳಿ ವೀರಭದ್ರೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಪಟ್ಟಣದ ದೇವೀರಮ್ಮಣ್ಣಿ ಕೆರೆ ಏರಿಯ ಮೇಲೆ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು. ರಾಯಸಮುದ್ರದ ಶ್ರೀನಾರಾಯಣದುರ್ಗದಲ್ಲಿ ಸಾವಿರಾರು ಭಕ್ತರು ಬೆಳಗ್ಗಿನಿಂದಲೇ ಬೆಟ್ಟ ಹತ್ತುವ ಮೂಲಕ ಕಲ್ಲೇಶ್ವರಸ್ವಾಮಿ ದರ್ಶನ ಪಡೆದರು. ಹರಿಹರೇಶ್ವರ ದೇವಾಲಯದಲ್ಲಿ ನೂರಾರು ಶಿವಭಕ್ತರು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಎಲ್ಲ ಶಿವನ ದೇವಾಲಯಗಳ ಗರ್ಭಗುಡಿಗಳಲ್ಲಿ ಸ್ವಾಮಿಯ ವಿಗ್ರಹವನ್ನು ವಿವಿಧ ಹೂವು, ಬೆಣ್ಣೆ ಸೇರಿದಂತೆ ಹಲವು ರೀತಿಯಲ್ಲಿ ಅಲಂಕರಿಸಲಾಗಿತ್ತು. ಭಕ್ತರು ಶಿವನಿಗೆ ಬಿಲ್ವಪತ್ರೆ ಅರ್ಪಿಸಿ ಪೂಜೆಸಲ್ಲಿಸಿ ತಮ್ಮ ಇಷ್ಟಾರ್ಥ ನಿವೇದಿಸಿಕೊಂಡು ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಹಲವು ದೇವಾಲಯಗಳಲ್ಲಿ ಹರಿಕಥೆ, ಭಜನೆ, ದೇವರ ಕೀರ್ತನೆಗಳನ್ನು ಏರ್ಪಡಿಸಲಾಗಿತ್ತು.