ಸಾರಾಂಶ
ನವಲಗುಂದ: ಮಹದಾಯಿಗೆ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಗುವವರೆಗೂ ಕರ್ನಾಟಕ ಸರ್ಕಾರ ನೀಡಿರುವ ಗೋವಾ- ತಮ್ನಾರ ವಿದ್ಯುತ್ ಯೋಜನೆಗೆ ನೀಡಿರುವ ಸಹಮತಿ ತಡೆ ಹಿಡಿದು ಮರು ಪರಿಶೀಲಿಸಬೇಕು ಎಂದು ಮಹದಾಯಿ, ಕಳಸಾ- ಬಂಡೂರಿ ಹೋರಾಟಗಾರರು ಆಗ್ರಹಿಸಿದ್ದಾರೆ.
ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿರುವ ಅವರು, ಧಾರವಾಡದ ನರೇಂದ್ರ ಮೂಲಕ ಗೋವಾ-ತಮ್ನೂರ ವಿದ್ಯುತ್ ಯೋಜನೆ ಹಾಯ್ದು ಹೋಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿ ಸಹಮತಿಸಿದೆ.ಮಹದಾಯಿ ನ್ಯಾಯಾಧೀಕರಣ ಐ-ತೀರ್ಪಿನಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಉಪಯೋಗಿಸಲು ಆದೇಶ ನೀಡಿದೆ. ನಂತರ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶ ಬಳಸಿಕೊಳ್ಳಲು ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೂ ಅನುಮತಿ ಸಿಕ್ಕಿಲ್ಲ. ಅನುಮತಿ ಪಡೆಯಲು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ಮಲಪ್ರಭಾ ಬಲದಂಡೆ ಕಾಲುವೆ ಆಧುನೀಕರಣ ಬಾಕಿ ಇರುವ ಕಾಮಗಾರಿ ಪ್ರಾರಂಭಿಸಿ ಕೊನೆಯ ಅಂಚಿನ ರೈತರ ಜಮೀನುಗಳಿಗೆ ನೀರು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ವರ್ಷ ಮುಂಗಾರು ಮಳೆ ಹೆಚ್ಚಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ,ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು,ಗ್ರಾಮೀಣಾಭಿವೃದ್ಧಿ ಇಲಾಖೆಯ ರಸ್ತೆಗಳು ನಗರ ಹಾಗೂ ಗ್ರಾಮಗಳಲ್ಲಿ ಸಂಚರಿಸಲಿಕ್ಕೆ ತೊಂದರೆಯಾಗುತ್ತಿದೆ. ರೈತರು ಬೆಳೆದ ಮುಂಗಾರು ಬೆಳೆ ಹಾಳಾಗಿದ್ದು, ಬೆಳೆಹಾನಿ ಪರಿಹಾರ, ಫಸಲ್ ಬೀಮಾ ಯೋಜನೆಯಿಂದ ಸರಿಯಾಗಿ ರೈತರಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.ಶಾಸಕ ಎನ್. ಎಚ್.ಕೋನರಡ್ಡಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಮಹದಾಯಿ ರೈತ ಹೋರಾಟಗಾರರಾದ ಲೋಕನಾಥ ಹೆಬಸೂರ, ಸಿದ್ದು ತೇಜಿ, ವಿರೇಶ ಸೊಬರದಮಠ, ರಘುನಾಥ ನಡುವಿನಮನಿ, ಫಕ್ಕೀರಗೌಡ ವೆಂಕನಗೌಡ್ರ, ರವಿ ಕಂಬಳಿ, ಗೌಡಪ್ಪಗೌಡ ದೊಡ್ಡಮನಿ, ಬಸಣ್ಣ ಓಲೇಕಾರ ಸೇರಿದಂತೆ ಹಲವರು ಇದ್ದರು.