ಸಾರಾಂಶ
ಮಹದಾಯಿ ಹೋರಾಟದ ಕೇಂದ್ರ ಸಮಿತಿಗೆ 3-4 ತಿಂಗಳಲ್ಲಿ ಕಾರ್ಯಾರಂಭ ಮಾಡಿಸುವುದಾಗಿ ಈ ಹಿಂದೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಭರವಸೆ ನೀಡಿದ್ದರು. ಆದರೆ, ಅದನ್ನು ಇಂದಿಗೂ ಈಡೇರಿಸಿಲ್ಲ.
ಹುಬ್ಬಳ್ಳಿ:
ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಕಾರ್ಯಾರಂಭದ ಕುರಿತು ಕೇಂದ್ರ ಸಚಿವರು ಹಾಗೂ ಶಾಸಕರು ಜು. 21ರಂದು ನವಲಗುಂದದಲ್ಲಿ ನಡೆಯುವ 44ನೇ ವರ್ಷದ ರೈತರ ಹುತಾತ್ಮ ದಿನದಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಮುಖ್ಯಸ್ಥ ಸುಭಾಸಚಂದ್ರ ಪಾಟೀಲ ಒತ್ತಾಯಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3280 ದಿನಗಳಿಂದ ನವಲಗುಂದದಲ್ಲಿ ನಿರಂತರವಾಗಿ ಮಹದಾಯಿ ಹೋರಾಟ ನಡೆಯುತ್ತಿದ್ದು ಯೋಜನೆ ಜಾರಿ ಕುರಿತು ಜನಪ್ರತಿನಿಧಿಗಳು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.ತಾರ್ಕಿಕ ಅಂತ್ಯ ಹಾಡಿ:
ಮಹದಾಯಿ ಹೋರಾಟದ ಕೇಂದ್ರ ಸಮಿತಿಗೆ 3-4 ತಿಂಗಳಲ್ಲಿ ಕಾರ್ಯಾರಂಭ ಮಾಡಿಸುವುದಾಗಿ ಈ ಹಿಂದೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಭರವಸೆ ನೀಡಿದ್ದರು. ಆದರೆ, ಅದನ್ನು ಇಂದಿಗೂ ಈಡೇರಿಸಿಲ್ಲ. ಜು. 21ರಂದು ನಡೆಯುವ ರೈತರ ಹುತಾತ್ಮ ದಿನದಲ್ಲಿ ಯೋಜನೆ ಕಾರ್ಯಾರಂಭಕ್ಕೆ ಒಂದು ತಾರ್ಕಿಕ ಅಂತ್ಯ ಹಾಡುವ ಮೂಲಕ ಹುತಾತ್ಮ ರೈತರ ಮೂರ್ತಿಗೆ ಮಾಲಾರ್ಪಣೆ ಮಾಡಬೇಕು ಎಂದರು. ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತ ಅವಧಿಯಲ್ಲಿ ಅನೇಕ ರೈತರ ಸಾಲಮನ್ನಾ ಬಾಕಿ ಉಳಿದುಕೊಂಡಿದೆ. ಕೂಡಲೇ ರಾಜ್ಯ ಸರ್ಕಾರ ಉಳಿದ ರೈತರ ಸಾಲವನ್ನು ಮನ್ನಾ ಮಾಡಬೇಕು. ಜತೆಗೆ ರೈತರಿಗೆ ಬಾಕಿ ಉಳಿದಿರುವ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಇಚ್ಛಾಶಕ್ತಿಯ ಕೊರತೆ:
ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟ ಸಮಿತಿ ಗೌರವಾಧ್ಯಕ್ಷ ಶಿವಣ್ಣ ಹುಬ್ಬಳ್ಳಿ ಮಾತನಾಡಿ, ಮಹದಾಯಿ ಯೋಜನೆ ಕಾರ್ಯಾರಂಭದ ವಿಷಯದಲ್ಲಿ ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಇನ್ನಾದರೂ ರಾಜಕಾರಣಗಳು ತಮ್ಮ ಸ್ವಾರ್ಥ ಸಾಧನೆ ಕೈಬಿಟ್ಟು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಈ ಭಾಗದ ರೈತರ ಹಲವು ವರ್ಷಗಳ ಕನಸು ಸಾಕಾರಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.ನಿರಂತರ ಧರಣಿಯ ಎಚ್ಚರಿಕೆ:
ಮಹದಾಯಿ ಯೋಜನೆ ಕಾರ್ಯಾರಂಭಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಕಾಮಗಾರಿ ಶುರುವಾಗದಿದ್ದರೆ ಸಚಿವ ಜೋಶಿ ಮನೆಯ ಎದುರು ಟೆಂಟ್ ಹಾಕಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಶಿವಣ್ಣ ಹುಬ್ಬಳ್ಳಿ ಎಚ್ಚರಿಕೆ ನೀಡಿದರು.ಈ ವೇಳೆ ಬಸನಗೌಡ ಫಕ್ಕೀರಗೌಡ, ಮಲ್ಲೇಶ ಉಪ್ಪಾರ, ಸಿದ್ಲಿಂಗಪ್ಪ ಹಳ್ಳದ, ಮುರಗೆಪ್ಪ ಪಲ್ಲೇದ, ಗೋವಿಂದರಡ್ಡಿ ಮೊರಬದ, ಆನಿಗೊಂದಿ ಎಸ್, ಮಂಜುನಾಥ ಲೂತಿಮಠ, ಸಂಜೀವ ದುಮ್ಮಕ್ಕನಾಳ, ಲಕ್ಷ್ಮಣಗೌಡ್ರ ಶಿವನಗೌಡ್ರ ಇದ್ದರು.