ಮಹದಾಯಿ ತೀರ್ಪು ಜಾರಿಗೊಳಿಸುವಂತೆ ಆಗ್ರಹಿಸಿ ನಿರಂತರ ನಿರಶನ ನಡೆಸುತ್ತಿರುವ ರೈತರು ಇದೀಗ ಪಾಲಿಕೆಯ ಮೇಲೆ ಒತ್ತಡ ಹಾಕಲು ಶುರು ಮಾಡಿದ್ದಾರೆ.
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕಳೆದ 11 ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಮಹದಾಯಿ ನೀರಿಗಾಗಿ ಹೋರಾಟ ನಡೆಸುತ್ತಿರುವವರ ಚಿತ್ತ ಇದೀಗ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯತ್ತ ನೆಟ್ಟಿದೆ. ಬರೀ ಕೃಷಿ ಉದ್ದೇಶಕ್ಕಾಗಿಯೇ ನಿರ್ಮಿಸಿರುವ ಮಲಪ್ರಭಾ ನದಿ ಡ್ಯಾಂನಿಂದಲೇ ಕುಡಿಯಲು ಬಳಸುತ್ತಿದ್ದೀರಿ. ಅದರ ಲೆಕ್ಕ ಕೊಡಿ; ಇಲ್ಲವೇ ಮಹದಾಯಿ ವಿಷಯವಾಗಿ ಗಟ್ಟಿ ನಿರ್ಧಾರ ಪ್ರಕಟಿಸಿ..!
ಇದು ಮಹದಾಯಿ ಹೋರಾಟಗಾರರ ಬೇಡಿಕೆ. ಈ ನಿಟ್ಟಿನಲ್ಲಿ ಒಂದು ದಿನ ಸಾಂಕೇತಿಕವಾಗಿ ಧರಣಿ ನಡೆಸಿರುವ ಮಹದಾಯಿ ಹೋರಾಟಗಾರರು, ನಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದಲ್ಲಿ ನರಗುಂದ-ನವಲಗುಂದದಂತೆ ಪಾಲಿಕೆ ಆವರಣದಲ್ಲೇ ನಿರಂತರ ನಿರಶನ ಆರಂಭಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ನಿಟ್ಟಿನಲ್ಲಿ ನ. 19ರಂದು ಪಾಲಿಕೆ ರೈತರ ಹಾಗೂ ಪಾಲಿಕೆ ಸದಸ್ಯರ ಸಭೆಯನ್ನೂ ಕರೆದಿದೆ.ಮಹದಾಯಿ ನೀರಿಗಾಗಿ ಕಳೆದ 30 ವರ್ಷದಿಂದಲೇ ಹೋರಾಟ ನಡೆಯುತ್ತಿದೆ. ಆದರೆ ಕಳೆದ 11 ವರ್ಷದಿಂದ ನವಲಗುಂದ ಹಾಗೂ ನರಗುಂದಗಳಲ್ಲಿ ನಿರಂತರ ನಿರಶನ ನಡೆಯುತ್ತಿದೆ. ಈ ನಡುವೆ 2018ರಲ್ಲಿ ಮಹದಾಯಿ ನ್ಯಾಯಾಧೀಕರಣವೂ 3.9 ಟಿಎಂಸಿ ಅಡಿ ನೀರನ್ನು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪಟ್ಟಣಗಳ ಕುಡಿಯಲು ಬಳಸಿಕೊಳ್ಳಲು ಹಂಚಿಕೆ ಮಾಡಿ ತೀರ್ಪು ನೀಡಿದೆ. ಆದರೆ, ಕೇಂದ್ರ ಸರ್ಕಾರದಿಂದ ಈ ವರೆಗೂ ಅನುಮತಿ ಸಿಕ್ಕಿಲ್ಲ. ಹೀಗಾಗಿ ಕಾಮಗಾರಿ ಶುರುವಾಗಿಲ್ಲ.
ಪಾಲಿಕೆ ಎದುರೇಕೆ?ಮಹದಾಯಿ ತೀರ್ಪು ಜಾರಿಗೊಳಿಸುವಂತೆ ಆಗ್ರಹಿಸಿ ನಿರಂತರ ನಿರಶನ ನಡೆಸುತ್ತಿರುವ ರೈತರು ಇದೀಗ ಪಾಲಿಕೆಯ ಮೇಲೆ ಒತ್ತಡ ಹಾಕಲು ಶುರು ಮಾಡಿದ್ದಾರೆ. ಇದಕ್ಕೆ ಕಾರಣ, ಮಲಪ್ರಭಾ ನದಿ ನೀರು ಕುಡಿಯಲು ಬಳಸುತ್ತಿರುವುದು. ಮಲಪ್ರಭಾ ನದಿಗೆ ಡ್ಯಾಂ ನಿರ್ಮಿಸಲು 1963ರಲ್ಲಿ ಮಂಜೂರಾತಿ ಸಿಕ್ಕಿತು. ಆಗ ₹ 20 ಕೋಟಿಯಲ್ಲಿ ಡ್ಯಾಂ ನಿರ್ಮಿಸಲಾಯಿತು. 1973ರಲ್ಲಿ ಡ್ಯಾಂ ಪೂರ್ಣವಾಗಿ ನೀರು ಸಂಗ್ರಹಿಸಲು ಆರಂಭಿಸಿತು. ಕೃಷಿ ಬಳಕೆಯ ಉದ್ದೇಶಕ್ಕಾಗಿಯೇ ಈ ಡ್ಯಾಂ ನಿರ್ಮಿಸಲಾಯಿತು ಎಂಬುದು ಆಗಿನ ಡಿಪಿಆರ್ನಲ್ಲಿ ಉಲ್ಲೇಖವಿದೆ.
ಈ ನಡುವೆ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮೊದಲು ನೀರಸಾಗರದಿಂದಲೇ ನೀರು ಸರಬರಾಜು ಆಗುತ್ತಿತ್ತು. ಆದರೆ, ನಗರ ಬೆಳೆಯುತ್ತಿದ್ದಂತೆ ನೀರಸಾಗರ ನೀರು ಸಾಕಾಗಲಿಲ್ಲ. ಹೀಗಾಗಿ ಮಲಪ್ರಭಾ ನದಿಗೆ ಡ್ಯಾಂ ನಿರ್ಮಾಣವಾದಾಗಿನಿಂದಲೂ ಅಂದರೆ 1973ರಿಂದಲೇ ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿಗೂ ಇದೇ ಡ್ಯಾಂನ್ನು ಅವಲಂಬಿಸಬೇಕಾಗಿ ಬಂತು.ಅಲ್ಲಿಂದ ಈ ವರೆಗೂ 1, 2, 3ನೇ ಹಂತ ಆಗಾಗ ನೀರಿನ ಬಳಕೆಯನ್ನು ಹೆಚ್ಚಿಸುತ್ತಲೇ ಪಾಲಿಕೆ ಸಾಗಿತು. ಪ್ರಸ್ತುತ ಪ್ರತಿನಿತ್ಯ 40 ಎಂಎಲ್ಡಿ ನೀರನ್ನು ಪಾಲಿಕೆ ಕುಡಿಯುವುದಕ್ಕಾಗಿ ಬಳಕೆ ಮಾಡುತ್ತಿದೆ. ವರ್ಷಕ್ಕೆ 2.01 ಟಿಎಂಸಿ ಅಡಿ ನೀರನ್ನು ಪಾಲಿಕೆ ಮಲಪ್ರಭಾ ನದಿಯಿಂದ ಬಳಕೆ ಮಾಡುತ್ತಿದೆ. ಇನ್ನು ಕೈಗಾರಿಕೆಗಾಗಿ ಪ್ರತಿನಿತ್ಯ 4 ಲಕ್ಷ ಲೀಟರ್ ನೀರು ಮಲಪ್ರಭಾ ನದಿಯಿಂದ ಬಳಕೆಯಾಗುತ್ತಿದೆ. ಕೃಷಿಗೇ ಅಂತ ಮೀಸಲಿಟ್ಟಿರುವ ನೀರಿನಲ್ಲಿ ಸ್ವಲ್ಪ ಭಾಗ ಮಹಾನಗರದ ಜನತೆ ದಾಹ ತೀರಿಸಿದರೆ, ಕೆಲ ಭಾಗ ಕೈಗಾರಿಕೆಗಳಿಗೆ ಹಂಚಿಕೆಯಾಗುತ್ತಿದೆ.
ಇನ್ನು ನ್ಯಾಯಾಧಿಕರಣದಲ್ಲಿ ಹಂಚಿಕೆಯಾಗಿರುವ ಮಹದಾಯಿ ನೀರು ಪೂರ್ಣವಾಗಿ ಕುಡಿಯಲು ಮಾತ್ರ ಎಂದು ಹಂಚಿಕೆಯಾಗಿದೆ. ಹಂಚಿಕೆಯಾಗಿರುವ ನೀರು ಸರಬರಾಜು ಆದರೆ ಡ್ಯಾಮಿನಿಂದ ಕುಡಿಯಲು ಪಾಲಿಕೆ ಬಳಸುತ್ತಿರುವ ನೀರು ಎತ್ತುವಳಿಯನ್ನು ನಿಲ್ಲಿಸುತ್ತದೆ. ಆಗ ಪೂರ್ಣವಾಗಿ ಕೃಷಿಗೆ ಬಳಕೆಯಾಗುತ್ತದೆ ಎಂಬ ಲೆಕ್ಕಾಚಾರ ಹೋರಾಟಗಾರರದ್ದು.ಹೀಗಾಗಿ ಮಲಪ್ರಭಾ ನದಿಯಿಂದ ಈ ವರೆಗೂ ಕುಡಿಯಲು ಬಳಸಿರುವ ನೀರಿನ ಪ್ರಮಾಣದ ಲೆಕ್ಕ ಕೊಡಿ. ಇಲ್ಲವೇ ಮಹದಾಯಿ ಜಾರಿ ವಿಷಯದಲ್ಲಿ ಗಟ್ಟಿ ನಿರ್ಧಾರ ಕೈಗೊಂಡು ಸರ್ಕಾರದ ಮೇಲೆ ಪಾಲಿಕೆಯಿಂದಲೂ ಒತ್ತಡ ಹಾಕಿ ಎಂಬ ಬೇಡಿಕೆ ಹೋರಾಟಗಾರರದ್ದು. ಒಂದು ವೇಳೆ ಸರ್ಕಾರದ ಮೇಲೆ ಒತ್ತಡ ಹಾಕದಿದ್ದಲ್ಲಿ ಇಷ್ಟು ವರ್ಷ ನೀರು ಬಳಸಿ ವಸೂಲಿಯಾದ ತೆರಿಗೆ ಹಣವನ್ನು ಮಲಪ್ರಭಾ ನದಿ ಪಾತ್ರದ ರೈತರಿಗೆ ನೀಡಿ ಎಂಬ ಬೇಡಿಕೆ ರೈತರದ್ದು.
ಹೀಗಾಗಿ ಪಾಲಿಕೆ ಇದೀಗ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದ್ದು, ಈ ಸಂಬಂಧ ಚರ್ಚಿಸಲು ನ. 19ರಂದು ಸಭೆ ಕರೆದಿದೆ. ಸಭೆಯಲ್ಲಿ ಏನಾಗುತ್ತೋ ಕಾಯ್ದು ನೋಡಬೇಕಷ್ಟೇ!ಮಹದಾಯಿ ಹೋರಾಟಗಾರರು ಇದೀಗ ಪಾಲಿಕೆಗೆ ಬಿಸಿ ಮುಟ್ಟಿರುವುದಂತೂ ಸತ್ಯ.!