ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ 5 ದಿನಗಳ ಕಾಲ ನಡೆಯುವ ಜಾತ್ರೆಗೆ ಸಕಲ ಸಿದ್ಧತೆಯನ್ನು ಹಮ್ಮಿಕೊಳ್ಳಲಾಗಿದೆ.

ಸಾಲೂರು ಬೃಹನ್ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ಹಮ್ಮಿಕೊಳ್ಳಲಾಗಿದೆ .

ಜಾತ್ರೆ ಪ್ರಯುಕ್ತ ಫೆ.14ರ ಶನಿವಾರ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಪ್ರಾರಂಭ ಹಾಗೂ ಸಾಲೂರು ಬೃಹನ್ ಮಠಕ್ಕೆ ಉತ್ಸವ ಮೂರ್ತಿ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. 15ರ ಭಾನುವಾರ ಮಹಾಶಿವರಾತ್ರಿ ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಉತ್ಸಾವದಿಗಳು ಮತ್ತು ಜಾಗರಣೆ ಉತ್ಸವ ಹಾಗೂ ಯಾಮ ಪೂಜೆಯ ನಂತರ ಶ್ರೀ ಸ್ವಾಮಿಗೆ ಬಂಗಾರದ ಕಿರೀಟಧಾರಣೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 16ರ ಸೋಮವಾರ ಶ್ರೀ ಸ್ವಾಮಿಗೆ ವಿಶೇಷ ಪೂಜೆ ಸೇವೆ ಮತ್ತು ಉತ್ಸಾವದಿಗಳು, 17ರ ಮಂಗಳವಾರ ಮಹಾಶಿವರಾತ್ರಿ ಅಮಾವಾಸ್ಯೆ ವಿಶೇಷ ಸೇವೆ ಮತ್ತು ಉತ್ಸಾವಾದಿಗಳು ನಡೆಯಲಿದೆ. 18ರ ಬುಧುವಾರ ಮಹಾಶಿವರಾತ್ರಿ ಮಹಾ ರಥೋತ್ಸವ ಬೆಳಗ್ಗೆ 10ರಿಂದ 11ಗಂಟೆಯವರೆಗೆ ಹಾಗೂ ಮಹಾರಾಥೋತ್ಸವದ ನಂತರ ಕುರು ಬ್ರಹ್ಮೋತ್ಸವ ಮತ್ತು ಅನ್ನಬ್ರಹ್ಮೋತ್ಸವ ಹಾಗೂ ರಾತ್ರಿ ಅಭಿಷೇಕ ಪೂಜೆ ಮುಗಿದ ನಂತರ ಕೊಂಡೋತ್ಸವ ವಿಶೇಷ ಪೂಜಾ ಕಾರ್ಯಕ್ರಮಗಳು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಮೂಲಭೂತ ಸೌಕರ್ಯಗಳಿಗೆ ಆದ್ಯತೆ:ಕ್ಷೇತ್ರದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಭಕ್ತರಿಗೆ ನೆರಳಿನ ವ್ಯವಸ್ಥೆ ಹಾಗೂ ವಿಶೇಷ ದಾಸೋಹ ವ್ಯವಸ್ಥೆಗೆ ಸಹ ಕ್ರಮ ಕೈಗೊಳ್ಳಲಾಗಿದೆ.ಮಹಾಶಿವರಾತ್ರಿ ಹಬ್ಬದ ದಿನದಂದು ಈ ಬಾರಿ ರಾತ್ರಿ ಜಾಗರಣೆ ಮಾಡುವ ಭಕ್ತರಿಗೆ ಅನುಕೂಲವಾಗಲು ಮಾದಪ್ಪನ ಭಕ್ತಿಗೀತೆ, ಜಾನಪದ ಗೀತೆ, ಕಥಾಪ್ರಸಂಗ, ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆಯನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಂ.ಆರ್‌. ಮಂಜುನಾಥ್ ತಿಳಿಸಿದರು.


ಭಕ್ತರ ಅನುಕೂಲತೆಗಾಗಿ ಪ್ರಾಧಿಕಾರದ ವತಿಯಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಎಲ್ಲಾ ರೀತಿಯಲ್ಲಿಯೂ ಉಸ್ತುವಾರಿ ಸಚಿವರ ಜಿಲ್ಲಾಧಿಕಾರಿಗಳ ಹಾಗೂ ಶಾಸಕರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ.

- ಎ.ಇ. ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟ.

ಭಕ್ತ ಸಮೂಹಕ್ಕೆ ಮೂಲಭೂತ ಸೌಲಭ್ಯಗಳನ್ನು ಸಹ ಕಲ್ಪಿಸಲಾಗಿದೆ ಜೊತೆಗೆ ಶ್ರೀಮಠದಲ್ಲೂ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಭಕ್ತಾದಿಗಳು ಸದ್ಬಳಕೆ ಮಾಡಿಕೊಂಡು ಧಾರ್ಮಿಕವಾಗಿ ಹಬ್ಬವನ್ನು ಆಚರಣೆ ಮಾಡಬೇಕು.

- ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಸಾಲೂರು ಬೃಹನ್ ಮಠ, ಮಲೆ ಮಹದೇಶ್ವರ ಬೆಟ್ಟ.