ಹಾರನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಕೋಡಿಮಠದಲ್ಲಿ ಮಹದೇಶ್ವರ ಜಾತ್ರೆಯ ಅಂಗವಾಗಿ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಬೆಳ್ಳಿ ಪಲ್ಲಕ್ಕಿ ಉತ್ಸವ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು. ಜಾತ್ರೆಯ ಅಂಗವಾಗಿ ಮಹದೇಶ್ವರ ಬೆಟ್ಟದಲ್ಲಿ ಗುಗ್ಗಳ ಸೇವೆ, ಹೆಜ್ಜೆ ನಮಸ್ಕಾರ ಹಾಗೂ ದಿಂಡುರುಳು ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ನಡೆಯಿತು. ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಂಗಮ ಪೂಜೆ ಹಾಗೂ ಮುತ್ತೈದೆ ಸೇವೆ ನೆರವೇರಿದ ಬಳಿಕ ಮಹಾದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಹಾರನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಕೋಡಿಮಠದಲ್ಲಿ ಮಹದೇಶ್ವರ ಜಾತ್ರೆಯ ಅಂಗವಾಗಿ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಬೆಳ್ಳಿ ಪಲ್ಲಕ್ಕಿ ಉತ್ಸವ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.ಮುಂಜಾನೆ ಶಿವಲಿಂಗ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಪೂಜೆ ನೆರವೇರಿಸಲಾಯಿತು. ಜಾತ್ರೆಯ ಅಂಗವಾಗಿ ಮಠವನ್ನು ವಿವಿಧ ಬಗೆಯ ಹೂಗಳು, ಹಸಿರು ಮಾವಿನ ತಳಿರು ತೋರಣಗಳು ಹಾಗೂ ವಿದ್ಯುತ್ ದೀಪಗಳಿಂದ ಸಿಂಗಾರಿಸಲಾಗಿತ್ತು. ಪಲ್ಲಕ್ಕಿ ಮೆರವಣಿಗೆ ಮಾರ್ಗದುದ್ದಕ್ಕೂ ಭಕ್ತರು ಹಾಗೂ ಗ್ರಾಮಸ್ಥರು ಭಕ್ತಿಭಾವದಿಂದ ಪಾಲ್ಗೊಂಡು ಸ್ವಾಮೀಜಿಯವರ ಆಶೀರ್ವಾದ ಪಡೆದರು. ಜಾತ್ರೆಯ ಅಂಗವಾಗಿ ಹಾರನಹಳ್ಳಿ ಮತ್ತು ಕೋಡಿಮಠ ಗ್ರಾಮವನ್ನು ಸ್ವಚ್ಛಗೊಳಿಸಿ, ಮನೆಮುಂದೆ ರಂಗೋಲಿ ಬಿಡಿಸಿ ಹಬ್ಬದ ಸಂಭ್ರಮದಿಂದ ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ ವೀರಗಾಸೆ ಕುಣಿತ, ಸಂಗೀತ, ನೃತ್ಯ, ಭಜನಾ ತಂಡಗಳು, ಡೊಳ್ಳಿನ ಮಜಲು ಹಾಗೂ ಕರಡಿ ಮಜಲು ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಭಾಗವಹಿಸಿ ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು. ಈ ಸಂದರ್ಭ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಭಕ್ತರ ಮಧ್ಯೆ ಹಾರನಹಳ್ಳಿ ಪುರ ಪ್ರವೇಶ ಮಾಡಿದರು. ಪಲ್ಲಕ್ಕಿ ಉತ್ಸವದಲ್ಲಿ ಜಾನಪದ ವೀರಗಾಸೆ ನೃತ್ಯ ಹಾಗೂ ನಂದಿಧ್ವಜ ಕುಣಿತ ವಿಶೇಷ ಆಕರ್ಷಣೆಯಾಗಿ ಕಾಣಿಸಿಕೊಂಡಿತು. ಸುಡು ಬಿಸಿಲಿನ ನಡುವೆಯೂ ಭಕ್ತರು ಉತ್ಸಾಹದಿಂದ ಪಲ್ಲಕ್ಕಿಯನ್ನು ಹೊತ್ತು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಜಾತ್ರೆಯ ಅಂಗವಾಗಿ ಮಹದೇಶ್ವರ ಬೆಟ್ಟದಲ್ಲಿ ಗುಗ್ಗಳ ಸೇವೆ, ಹೆಜ್ಜೆ ನಮಸ್ಕಾರ ಹಾಗೂ ದಿಂಡುರುಳು ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ನಡೆಯಿತು. ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಂಗಮ ಪೂಜೆ ಹಾಗೂ ಮುತ್ತೈದೆ ಸೇವೆ ನೆರವೇರಿದ ಬಳಿಕ ಮಹಾದಾಸೋಹ ವ್ಯವಸ್ಥೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಉತ್ತರಾಧಿಕಾರಿ ಚೇತನ್ ಮರಿದೇವರು, ಇತಿಹಾಸ ಪ್ರಸಿದ್ಧ ಕೋಡಿಮಠದ ಮಹದೇಶ್ವರ ಜಾತ್ರಾ ಮಹೋತ್ಸವವು ತನ್ನದೇ ಆದ ವಿಶಿಷ್ಟ ಪರಂಪರೆ ಹೊಂದಿದ್ದು ಅಪಾರ ಭಕ್ತ ಸಮೂಹವನ್ನು ಸೆಳೆಯುತ್ತದೆ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಪಲ್ಲಕ್ಕಿಯನ್ನು ಹೊರುವ ಭಾಗ್ಯ ದೊರೆಯುವುದನ್ನು ಭಕ್ತರು ಪವಿತ್ರ ಅವಕಾಶವೆಂದು ಪರಿಗಣಿಸುತ್ತಾರೆ. ಇಂತಹ ಜಾತ್ರೆಗಳು ಜನರ ಧಾರ್ಮಿಕ ಭಾವನೆಗಳನ್ನು ಬಲಪಡಿಸುವುದರ ಜೊತೆಗೆ ಸಮಾಜದಲ್ಲಿ ಸೌಹಾರ್ದ ಹಾಗೂ ಬಾಂಧವ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.