ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳು ಮಲೆಮಾದೇಶ್ವರ ಬೆಟ್ಟಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದರು. ಹನೂರಿನ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳು ಮಲೆಮಾದೇಶ್ವರ ಬೆಟ್ಟಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದರು.

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನಾಗಮಲೆ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಲೆಮಾದೇಶ್ವರ ಬೆಟ್ಟಕ್ಕೆ ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಿ ಉದ್ಘಾಟನೆ ಮಾಡಲಿರುವ ಕಾಮಗಾರಿಗಳಾದ 316 ಕೊಠಡಿ ಕಾಮಗಾರಿ ಯುಜಿಡಿ ಹಾಗೂ ಸೋಲಾರ್ ಪ್ಲಾಂಟ್ ಮತ್ತು ಸಿಸಿ ರಸ್ತೆಗಳು, ದೊಡ್ಡಕೆರೆ ಅಭಿವೃದ್ಧಿ ಮತ್ತು 108 ಅಡಿ ಮಲೆ ಮಹದೇಶ್ವರ ಪ್ರತಿಮೆ ರಸ್ತೆಯ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಪ್ರತಿಮೆ ಸ್ಥಳದಲ್ಲಿರುವ ಮಹದೇಶ್ವರ ಚರಿತ್ರೆಯ ಪೂರ್ಣ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲು ನಡೆಯುತ್ತಿರುವ ಕಾಮಗಾರಿ ಚುರುಕುಗೊಳಿಸಿ ಆದಷ್ಟು ಬೇಗ ಕ್ರಮ ವಹಿಸಲು ಸೂಚನೆ ನೀಡಿದರು.

ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಮ.ಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರು ಅಧಿಕಾರಿಗಳು ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಾವುದೇ ರೀತಿಯಲ್ಲಿ ಭಕ್ತಾದಿಗಳಿಗೆ ಲೋಪದೋಷಗಳು ಬರದಂತೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಜೊತೆಗೆ ಮಾದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆಗೊಳಿಸಲು ಬರುತ್ತಿರುವುದರಿಂದ ಸಾಲೂರು ಮಠದ ವೇದ ಆಗಮ ಶಾಲೆಯ ಕಾಮಗಾರಿ ಪೂರ್ಣಗೊಳಿಸಿ ಕ್ರಮ ಕೈಗೊಳ್ಳಬೇಕು.

ದೀಪಾವಳಿ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆಯಲ್ಲಿ ಇರುವುದರಿಂದ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯದ ವ್ಯವಸ್ಥೆ ವಿಶೇಷ ದಾಸೋಹ ವ್ಯವಸ್ಥೆ ಹಾಗೂ ಮಾಹಿತಿ ಕೇಂದ್ರಗಳಲ್ಲಿ ಬರುವ ಭಕ್ತಾದಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ತಾಲೂಕಿನ ವಿವಿಧೆಡೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚೆಗೆ ನೂತನವಾಗಿ ತೆರೆಯಲಾಗಿರುವ ಸಫಾರಿ ಕೇಂದ್ರವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಣೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕಿನ ಪ್ರೇಕ್ಷಣೀಯ ಸ್ಥಳವಾದ ಭರಚುಕ್ಕಿ ಜಲಪಾತದ ಹಾಗೂ ಹೊಗೆನಕಲ್ ಜಲಪಾತ ಹಾಗೂ ನಾಗಮಲೆ ಚಾರಣಕ್ಕೆ ತೆರಳುವ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಅಭಿವೃದ್ಧಿ ಕಾಮಗಾರಿಗಳ ಮೂಲಕ ಸಕಲ ಸೌಕರ್ಯ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕಾಮಗಾರಿಗಳ ಪರಿಶೀಲನೆ:

ಮಲೆಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ನಿಗದಿತ ಸಮಯದಲ್ಲಿ ಕಾಮಗಾರಿ ಯಾವುದೇ ಲೋಪದೋಷಗಳು ಇಲ್ಲದಂತೆ ಕ್ರಮವಹಿಸುವ ಮೂಲಕ ಶ್ರೀ ಕ್ಷೇತ್ರ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಸಕಲ ರೀತಿಯಲ್ಲಿಯೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಸಾಲೂರು ಶ್ರೀ ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಕವಿತಾ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಚಾಮರಾಜನಗರ ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ ಮೊನರೋತ್, ಡಿಸಿಎಫ್ ಸಂತೋಷ್ ಕುಮಾರ್, ದಂಡಾಧಿಕಾರಿ ಗುರುಪ್ರಸಾದ್, ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಎಇ ಮಹೇಶ್, ಮಲೆ ಮಾದೇಶ್ವರ ಬೆಟ್ಟ ಇನ್ಸ್‌ಪೆಕ್ಟರ್ ಜಗದೀಶ್, ಅರಣ್ಯ ಅಧಿಕಾರಿಗಳು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿ ವಿವಿಧ ಇಲಾಖೆಯ ಅಧಿಕಾರಿವರ್ಗ ಉಪಸ್ಥಿತರಿದ್ದರು.

ಕ್ಯಾಬಿನೆಟ್ ಸಭೆಗೆ ನಿರ್ಧಾರ: ಮಲೆಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯನವರು ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ಆಗಮಿಸಲಿದ್ದು ದೀಪದ ಗಿರಿ ಒಡ್ಡುವಿನ ಮ್ಯೂಸಿಯಂ, ದೊಡ್ಡಕೆರೆ ಮೈದಾನ, 386 ರೂಮ್‌ಗಳ ವಸತಿಗೃಹ, ವೇದ ಆಗಮ ಸಂಸ್ಕೃತ ಪಾಠಶಾಲೆ ಸೇರಿದಂತೆ ಇನ್ನಿತರ ಕಟ್ಟಡಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಇನ್ನು ಈ ಬಾರಿ ಮಲೆಮಹದೇಶ್ವರ ಬೆಟ್ಟದಲ್ಲಿಯೇ ಕ್ಯಾಬಿನೆಟ್ ಸಭೆ ಮಾಡಲು ನಿರ್ಧರಿಸಲಾಗಿರುವುದರಿಂದ ಸರ್ಕಾರದ ಕಾರ್ಯದರ್ಶಿ, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಈಗಾಗಲೇ ಅಗತ್ಯ ಸೌಲಭ್ಯಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆಯುವುದರಿಂದ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಕಿ ಇರುವ ಯೋಜನೆಗಳು ಪೂರ್ಣವಾಗಲಿದೆ ಎಂಬ ನಿರೀಕ್ಷೆ ಇದೆ.