ಸಾರಾಂಶ
ಕೌದಳ್ಳಿ ಗ್ರಾಮದ ಬಳಿ ಪೊಲೀಸ್ ಕ್ರಮ । ಐದು ದಿನದ ಉತ್ಸವ
ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಐದು ದಿನದ ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ದ್ವಿಚಕ್ರ ವಾಹನ ಸವಾರರು ಹಾಗೂ ಆಟೋ ಇನ್ನಿತರ ವಾಹನಗಳನ್ನು ಕೌದಳ್ಳಿ ಬಳಿಯೇ ಪೊಲೀಸರು ತಡೆದು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಸುವ ಮೂಲಕ ಸೂಕ್ತ ಕ್ರಮ ಕೈಗೊಂಡಿದ್ದಾರೆ.ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಲೆ ಮಾದೇಶ್ವರ ಬೆಟ್ಟಕ್ಕೆ ಆಟೋ ಸೇರಿದಂತೆ ದ್ವಿಚಕ್ರ ವಾಹನಗಳಿಗೆ ನಿಷೇಧ ಹಿನ್ನಲೆ ಮಲೆ ಮಾದೇಶ್ವರ ಬೆಟ್ಟಕ್ಕೆ ಕೌದಳ್ಳಿ ಬಳಿಯ ಗಾರ್ಡನ್ ಒಂದರಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸಂಚಾರ ಮುಕ್ತ:ಮಲೆ ಮಾದೇಶ್ವರ ಬೆಟ್ಟಕ್ಕೆ ಹಬ್ಬ, ವಿಶೇಷ ಜಾತ್ರಾ ದಿನಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಮಾದಪ್ಪನ ಭಕ್ತಾದಿಗಳು ವಿಶೇಷ ವಾಹನಗಳಲ್ಲಿ ಜತೆಗೆ ದ್ವಿಚಕ್ರ ವಾಹನ ಸೇರಿದಂತೆ ಆಟೋಗಳಲ್ಲಿ ಬರುವುದರಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ಮತ್ತು ಮಲೆ ಮಾದೇಶ್ವರ ಬೆಟ್ಟದಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ಆಟೋಗಳನ್ನು ಪಾರ್ಕಿಂಗ್ ಮಾಡುತ್ತಿದ್ದರಿಂದ ಸಂಚಾರಕ್ಕೆ ತೊಡಕು ಉಂಟಾಗುತ್ತಿತ್ತು. ಇದನ್ನು ಅರಿತು ಚಾಮರಾಜನಗರ ಜಿಲ್ಲಾಧಿಕಾರಿ ಮಲೆ ಮಾದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನ ಹಾಗೂ ಆಟೋಗಳನ್ನು ನಿಷೇಧಿಸುವ ಮೂಲಕ ಮುಕ್ತ ಸಂಚಾರಕ್ಕೆ ಭಾರಿ ವಾಹನಗಳಿಗೆ ಕೌದಳ್ಳಿ ಗ್ರಾಮದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ನಂತರ ಇಲ್ಲಿಂದ ಕರ್ನಾಟಕ ರಾಜ್ಯ ಸಾರಿಗೆ ವಾಹನಗಳಲ್ಲಿ ಭಕ್ತಾದಿಗಳು ತೆರಳುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು.
ಕಟ್ಟುನಿಟ್ಟಿನ ಕ್ರಮ:ರಾಮಪುರ ಪೊಲೀಸರು ಕೌದಳ್ಳಿ ಗ್ರಾಮದ ಗಾರ್ಡನ್ ಮುಖ್ಯರಸ್ತೆಯ ಬಳಿ ವಾಹನಗಳನ್ನು ಪಾರ್ಕಿಂಗ್ ಮಾಡಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದಾರೆ.