ಕನ್ನಡಪ್ರಭ ವಾರ್ತೆ ನಾಗಮಂಗಲ
ಹಳ್ಳಿಗಳಲ್ಲಿ ನಿರ್ಮಿಸುವ ಮಹಾದ್ವಾರಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿರುತ್ತವೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.ತಾಲೂಕಿನ ತುಪ್ಪದಮಡು ಗ್ರಾಮದ ಪ್ರವೇಶದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಮ್ಮ ಪೂರ್ವಿಕರು ನಡೆಸುತ್ತಿದ್ದ ಧಾರ್ಮಿಕ ಪರಂಪರೆಗಳು ಇಂದಿಗೂ ಕೂಡ ಉಳಿದಿರುವುದು ಹಳ್ಳಿಗಳಲ್ಲಿ ಮಾತ್ರ ಎಂದರು.
ತುಪ್ಪದಮಡು ಗ್ರಾಮಸ್ಥರು ಬಹುವರ್ಷಗಳಿಂದಲೂ ನನ್ನ ಮೇಲೆ ಅಪಾರ ಪ್ರೀತಿ ವಿಶ್ವಾಸ ಹೊಂದಿದ್ದಾರೆ. ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಕೊಟ್ಟು ಹೆಚ್ಚು ಶಕ್ತಿ ತುಂಬಿದ್ದಾರೆ. ಅಂತಹ ಜನರ ಋಣ ತೀರಿಸುವ ಸಲುವಾಗಿ ಗ್ರಾಮಕ್ಕೆ ರಸ್ತೆ ಚರಂಡಿ, ಎಸ್ಸಿ, ಎಸ್ಟಿ ಹಾಗೂ ವೀರಶೈವ ಸಮಾಜದ ಜನರ ಅನುಕೂಲಕ್ಕಾಗಿ ಪ್ರತ್ಯೇಕ ಸಮುದಾಯಭವನ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದ್ದೇನೆ ಎಂದರು.ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗಳೂ ಸಹ ಸರ್ವತೋಮುಖ ಅಭಿವೃದ್ಧಿಯಾಗಬೇಕೆಂಬ ಉದ್ದೇಶ ನನ್ನದಾಗಿದೆ. ಕಳೆದ ಮೂರು ವರ್ಷದಿಂದ ಜನರ ನಿರೀಕ್ಷೆಗೂ ಮೀರಿ ತಾಲೂಕಿನಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ. ಜನರು ಇದನ್ನು ಅರ್ಥೈಸಿಕೊಂಡು ಮುಂಬರುವ ಯಾವುದೇ ಚುನಾವಣೆಗಳಲ್ಲಿ ಅಭಿವೃದ್ಧಿ ಕೆಲಸ ಮಾಡುವ ಇಚ್ಛಾಶಕ್ತಿ ಹಾಗೂ ಜನಪರ ಕಾಳಜಿ ಇರುವ ವ್ಯಕ್ತಿಗಳನ್ನು ಬೆಂಬಲಿಸಿ ಆಶೀರ್ವದಿಸಬೇಕು ಎಂದರು.
ಗ್ರಾಮಕ್ಕೆ ಭೇಟಿ ಕೊಟ್ಟ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಊರಿನ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಂಬಿಟ್ಟು ಹಾಗೂ ಬೆಲ್ಲದಾರತಿಯೊಂದಿಗೆ ಅದ್ಧೂರಿ ಸ್ವಾಗತ ಕೋರಿ ಬರಮಾಡಿಕೊಂಡರು.
ನಂತರ ತಾಲೂಕಿನ ಪಡುವಲಪಟ್ಟಣ ಗ್ರಾಮದಿಂದ ಶ್ರೀಕಾನನಬ್ರಹ್ಮದೇವರ ದೇವಸ್ಥಾನದವರೆಗೆ 3 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವರು, ಹೊಸೂರುಕೊಪ್ಪಲು, ಗಂಗನಹಳ್ಳಿ, ಉಯ್ಯನಹಳ್ಳಿ, ಮುದ್ದನಹಳ್ಳಿ, ವಡ್ಡರಹಟ್ಟಿ, ಅಣೆಚನ್ನಾಪುರ ಹಾಗೂ ವರಹಾಸಂದ್ರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಕೆಆರ್‌ಐಡಿಎಲ್ ಎಇಇ ಚೈತ್ರ, ಜೆಇ ಶರತ್, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ರಾಘವೇಂದ್ರ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಧನರಾಜ್, ಮಾಜಿ ಅಧ್ಯಕ್ಷೆ ಚಿಕ್ಕಮ್ಮ, ತಾಪಂ ಮಾಜಿ ಸದಸ್ಯ ಲಕ್ಷ್ಮಿನಾರಾಯಣಪ್ಪ, ಮುಖಂಡರಾದ ಸುನಿಲ್ ಲಕ್ಷ್ಮಿಕಾಂತ್, ನೂತನ್‌ಗೌಡ, ಅಣೆಚನ್ನಾಪುರ ಮಂಜೇಶ್, ಎಸ್.ಬಿ.ರಮೇಶ್, ಪಿ.ಜೆ.ಜಯರಾಂ, ಸಂಪತ್‌ಕುಮಾರ್ ಸೇರಿದಂತೆ ಹಲವರು ಇದ್ದರು.