ಸಾರಾಂಶ
ಮೈಸೂರು: ವಿದ್ಯಾರ್ಥಿಗಳು ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವಿ.ವಿ. ಪುರಂ ಸಂಚಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಂ.ಆರ್. ಲವ ತಿಳಿಸಿದರು. ನಗರದ ಮಹಾಜನ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಸಂಚಾರ ಹಾಗೂ ರಸ್ತೆ ಸುರಕ್ಷತೆ ನಿಯಮಗಳ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿನಿತ್ಯ ನಗರದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳಬೇಕು ಎಂದರು. ವಾಹನ ಚಾಲನೆ ಮಾಡುವ ಸಂದರ್ಭ ಚಾಲಕರು ಮೊಬೈಲ್ ಫೋನ್ ಬಳಸಬಾರದು. ಇದರಿಂದ ವಾಹನ ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗದೆ ಅನೇಕ ಅಪಘಾತಗಳು ನಡೆಯುತ್ತವೆ. ವಾಹನಗಳ ಚಾಲನೆ ಸಂದರ್ಭ ವಾಹನದ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ನಾಲ್ಕು ಚಕ್ರವಾಹನಗಳ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಬಳಸುವುದು ಮುಖ್ಯ ಎಂದು ಅವರು ಹೇಳಿದರು. ಅತಿ ವೇಗದ ಚಾಲನೆ ಮಾಡುವುದರಿಂದ ರಸ್ತೆಯಲ್ಲಿ ಗುಂಡಿಗಳು, ಎದುರಿನಿಂದ ಬರುವ ವಾಹನ ಇತ್ಯಾದಿ ಕಾರಣಗಳಿಂದ ಅಪಘಾತಗಳು ಸಂಭವಿಸಬಹುದು. ಹೀಗಾಗಿ, ಚಾಲಕರು ವೇಗದ ಮಿತಿಯಲ್ಲಿ ಚಾಲನೆ ಮಾಡುವುದು ಉತ್ತಮ. ನಿಮ್ಮನ್ನು ನೀವೇ ರಕ್ಷಣೆ ಮಾಡಿಕೊಳ್ಳಬೇಕು ಎಂದರು. ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ಮುರಳಿಧರ್, ಮಹಾಜನ ಕಾನೂನು ಕಾಲೇಜು ಪ್ರಾಂಶುಪಾಲೆ ಕೆ. ಸೌಮ್ಯಾ ಮೊದಲಾದವರು ಇದ್ದರು.ೇ