ಮಳೆ ಕೊರತೆ ಹಾಗೂ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಧೈರ್ಯ ತುಂಬಿ, ಅವರ ಬದುಕಿನಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ನ.13ರಂದು ಹರ್ತಿ ಗ್ರಾಮದಲ್ಲಿ ಮಹಾಲಕ್ಷ್ಮೀ ಪೂಜೆ, ಮಳೆಗಾಗಿ ಹೋಮ ಹಾಗೂ ರೈತರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಮಳೆ ಕೊರತೆ ಹಾಗೂ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಧೈರ್ಯ ತುಂಬಿ, ಅವರ ಬದುಕಿನಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ನ.13ರಂದು ಹರ್ತಿ ಗ್ರಾಮದಲ್ಲಿ ಮಹಾಲಕ್ಷ್ಮೀ ಪೂಜೆ, ಮಳೆಗಾಗಿ ಹೋಮ ಹಾಗೂ ರೈತರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ದಸರಾ, ದೀಪಾವಳಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗದ ಸ್ಥಿತಿಯಲ್ಲಿದ್ದಾರೆ. ಕೃಷಿ ಕಾರ್ಮಿಕರಿಗೂ ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಅನ್ನದಾತರೊಂದಿಗೆ ದೀಪಾವಳಿ ಆಚರಿಸಿ ಅವರ ಬದುಕಿನಲ್ಲಿ ಸಂತೋಷದ ಬೆಳಕು ಮೂಡಿಸುವ ಸಂಕಲ್ಪ ಮಾಡಲಾಗಿದೆ ಎಂದರು.

ಕೊಲ್ಲಾಪುರದಿಂದ ಮಹಾಲಕ್ಷ್ಮೀ ಮೂರ್ತಿ ತರಿಸಿ ವಿಶೇಷ ಪೂಜೆ ನೆರವೇರಿಸಲಾಗುವುದು. ಇಂದ್ರದೇವನ ಹೋಮ, ಹಟ್ಟಿ ಪೂಜೆ, ಗೋಮಾತೆ ಹಾಗೂ ಕೃಷಿ ಸಲಕರಣೆಗಳಿಗೆ ಪೂಜೆ ಸಲ್ಲಿಸಲಾಗುವುದು. ಕುಂಭಮೇಳದೊಂದಿಗೆ ಮಹಿಳೆಯರು, ಕಲಾವಿದರು ಮತ್ತು ರೈತರ ಮೆರವಣಿಗೆ ನಡೆಯಲಿದೆ. ಪುರಿ ಕ್ಷೇತ್ರದ ಪಂಡಿತರು ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದು, ಬೈಲಹೊಂಗಲದ ನಯಾನಗರ ಮಠದ ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಧಾರ್ಮಿಕ ಮುಖಂಡರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಬಾರದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬರಗಾಲ ಘೋಷಿಸಿದರೂ ಸಮರ್ಪಕ ಪರಿಹಾರ ನೀಡಿಲ್ಲ. ಬರಪೀಡಿತ ರೈತರಿಗೆ ಕನಿಷ್ಠ ₹20 ಸಾವಿರ ಪರಿಹಾರ ನೀಡಬೇಕು ಎಂದರು.

ರವಿ ಗುಂಜೀಕರ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ವಸಂತ ಪಡಗದ, ರವಿಕಾಂತ ಅಂಗಡಿ, ಸೋಮಣ್ಣ ಸೋಮರಡ್ಡಿ, ಮುತ್ತಣ್ಣ ಗದಗಿನ, ರಾಘವೇಂದ್ರ ಯಳವತ್ತಿ, ರಮೇಶ ಸಜ್ಜಗಾರ, ಪರಮೇಶ ನಾಯಕ ಸೇರಿದಂತೆ ಹಲವರಿದ್ದರು.