ಮಹಾಲಿಂಗೇಶ್ವರ ಮಹಾರಾಜಕೀ ಜೈ

| Published : Sep 19 2024, 01:53 AM IST

ಸಾರಾಂಶ

ಪಟ್ಟಣದ ಆರಾಧ್ಯ ದೈವ ಮಹಾಲಿಂಗೇಶ್ವರ ಜಾತ್ರೆ ರಥೋತ್ಸವಕ್ಕೆ ಬುಧವಾರ ಸಂಜೆ ಅದ್ಧೂರಿ ಚಾಲನೆ ದೊರೆಯಿತು. ವಿದ್ಯುತ್ ದೀಪ ಹಾಗೂ ಹೂಗಳಿಂದ ಅಲಂಕೃತವಾದ ತೇರಿಗೆ ಶ್ರೀಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ಆರಾಧ್ಯ ದೈವ ಮಹಾಲಿಂಗೇಶ್ವರ ಜಾತ್ರೆ ರಥೋತ್ಸವಕ್ಕೆ ಬುಧವಾರ ಸಂಜೆ ಅದ್ಧೂರಿ ಚಾಲನೆ ದೊರೆಯಿತು. ವಿದ್ಯುತ್‌ ದೀಪ ಹಾಗೂ ಹೂಗಳಿಂದ ಅಲಂಕೃತವಾದ ತೇರಿಗೆ ಶ್ರೀಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಮಹಾಲಿಂಗೇಶ್ವರ ಮಹಾರಾಜಕಿ ಜೈ ಎಂಬ ಜಯಘೋಷಗಳೊಂದಿಗೆ ಜಾತ್ರೆಯ ಪ್ರಥಮ ದಿನದ ತುಂಬಿದ ತೇರು ಭಕ್ತರ ಹರ್ಷೋದ್ಗಾರದ ನಡುವೆ ಸಂಭ್ರಮ-ಸಡಗರದಿಂದ ಜರುಗಿತು. ಜಾತ್ರೆಯ ನಿಮಿತ್ಯ ಮಹಾಲಿಂಗೇಶ್ವರರ ಕತುೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರಗಳನ್ನು ಮಾಡಲಾಗಿತ್ತು.

ಹರಿವಾಣ ಕಟ್ಟೆ ಲೂಟಿ:

ತುಂಬಿದ ತೇರು ಸಾಗುವ ಮುನ್ನ ಮಹಾಲಿಂಗೇಶ್ವರ ದೇವಸ್ಥಾನದ ಪಾದಗಟ್ಟಿಯ ಮುಂದೆ ನಿರ್ಮಿಸಲಾದ ಹರಿವಾಣ ಕಟ್ಟೆಯ ಲೂಟಿ ಕಾರ್ಯಕ್ರಮ ಜರುಗಿತು. ರೈತರು ತಂದು ಸಂಗ್ರಸಿದ್ದ ಕಬ್ಬು, ತೇನೆ, ಇತ್ಯಾದಿಗಳನ್ನು ಸಾವಿರಾರು ಭಕ್ತರು, ನನಗೆ-ನಿನಗೆ ಎಂದು ಒಬ್ಬರ ಮೇಲೊಬ್ಬರು ಬೀಳುತ್ತ ದೋಚಿಕೊಂಡು ಹೋಗುವಲ್ಲಿ ಯಶಸ್ವಿಯಾದರು.

ರಾತ್ರಿಯಿಡಿ ರಥೋತ್ಸವ:

ರಥೋತ್ಸವದ ಮುಂದೆ ಉಚ್ಚಾಯಿ, ನಂದಿಕೋಲು, ಕರಡಿ ಮಜಲು, ಶಹನಾಯಿ,ಸಂಬಾಳ ವಾದನ,ಡೊಳ್ಳಿನ ಕೈಪಟ್ಟು, ಕರಡಿ ಮೇಳದವರು, ಕುದರೆ ಮೇಳ ಸೇರಿದಂತೆ ಹಲವು ಮಂಗಳವಾದ್ಯಗಳು ರಥೋತ್ಸವದ ಮೇರಗನ್ನು ಮತ್ತಷ್ಟು ಹೆಚ್ಚಿಸಿದ್ದವು. ಶನಿವಾರ ರಾತ್ರಿ 7-30ಕ್ಕೆ ಪ್ರಾರಂಭವಾದ ತೇರು ಭಾನುವಾರ ನಸುಕಿನ 6ರವರೆಗೂ ಜರುಗಿದ ರಥೋತ್ಸವ ಮಹಾಲಿಂಗೇಶ್ವರ ಮಠದಿಂದ ನಡಚೌಕಿ ಮಾರ್ಗವಾಗಿ ಚನ್ನಗಿರೇಶ್ವರ ದೇವಸ್ಥಾನ ತಲುಪಿತು.

ಆಹೋರಾತ್ರಿ ನಡೆಯುವ ರಥೋತ್ಸವ ವೀಕ್ಷಿಸಲು ಬೆಂಗಳೂರ, ದಾವಣಗೇರಿ, ಹುಬ್ಬಳ್ಳಿ, ಬೆಳಗಾವಿ, ಬಿಜಾಪೂರ, ಬಾಗಲಕೋಟೆ, ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ಮಹಾಲಿಂಗೇಶ್ವರ ರಥೋತ್ಸವಕ್ಕೆ ಬೆಂಡು, ಬೆತ್ತಾಸು, ಹೂ, ಉತ್ತತ್ತಿ ಹಾರಿಸಿ, ಕಾಯಿ-ಕರ್ಪೂರ ಅರ್ಪಿಸಿ ಹರಕೆ ಸಲ್ಲಿಸಿದರು.

ರಥೋತ್ಸವದ ನಿಮಿತ್ತ ಪಟ್ಟಣದ ಎಲ್ಲ ರಸ್ತೆಗಳು ಜನ-ಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು. ಜವಳಿ ಬಜಾರ, ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ಬಯಲಾಟ, ಶ್ರೀಕೃಷ್ಣ ಪಾರಿಜಾತ, ಭಜನೆಗಳು, ರಸಮಂಜರಿ ಕಾರ್ಯಕ್ರಮಗಳು ಆಹೋರಾತ್ರಿ ಜರುಗಿದವು.

ತುಂಬಿದ ತೇರಿನ ನಿಮಿತ್ತ ಪರಸ್ಥಳದ ಭಕ್ತರಿಗಾಗಿ ಮಹಾಕಲಿಂಗೇಶ್ವರ ದೇವಾಲಯದಲ್ಲಿ ಮಧ್ಯಾಹ್ನ 12ಕ್ಕೆ ರಾಜೇಂದ್ರ ಸ್ವಾಮಿಗಳು ಅನ್ನಪೂರ್ಣೆಗೆ ಪೂಜೆ ಸಲ್ಲಿಸುವ ಮೂಲಕ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಮಧ್ಯಾಹ್ನದಿಂದ ತಡರಾತ್ರಿಯವರೆಗೂ ಅನ್ನ ಸಂತರ್ಪಣೆ ಜರುಗಿತು. ಮರುತೇರಿನ ನಿಮಿತ್ತ ಗುರುವಾರವೂ ಸಹ ಚನ್ನಗೀರೇಶ್ವರ ದೇವಸ್ಥಾನದಲ್ಲಿ ಅನ್ನಪ್ರಸಾದ ಜರುಗಲಿದೆ.

ಜಾತ್ರೆಯ ನಿಮಿತ್ತ ಭಕ್ತರು ಮಂಗಳವಾರ ರಾತ್ರಿ 12 ರಿಂದ ಗುರುವಾರ ಸಂಜೆ 5ವರೆಗೂ ಮಕ್ಕಳು, ಮಹಿಳೆಯರು. ವಯಸ್ಕರು ಸೇರಿದಂತೆ ಸಾವಿರಾರು ಭಕ್ತರು ಪವಿತ್ರ ಬಸವ ತೀರ್ಥದಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಶ್ರೀಮಠದವರೆಗೆ ದೀಡ ನಮಸ್ಕಾರ ಹಾಕುವುದರೊಂದಿಗೆ ತಮ್ಮ ತಮ್ಮ ಹರಕೆ ಸಲ್ಲಿಸಿದರು.