ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಸಾಕಷ್ಟು ಅವಕಾಶ

| Published : Mar 28 2024, 12:49 AM IST

ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಸಾಕಷ್ಟು ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಹಾಗೂ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವ ಕಲೆ ಬೆಳೆಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ಸ್ವಾವಲಂಬಿಯಾಗಿ ಬದುಕಲು ಸಾಕಷ್ಟು ಅವಕಾಶಗಳಿವೆ ಎಂದು ಸೈಕಲ್ ಪ್ಯೂರ್ ಅಗರಬತ್ತಿ ಕಂಪನಿಯ ಜಾಹ್ನವಿ ಮೂರ್ತಿ ಹೇಳಿದರು.

ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮಹಿಳಾ ಹಿತರಕ್ಷಣಾ ಸಮಿತಿ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿ, ಮಹಿಳೆಯರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಹಾಗೂ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವ ಕಲೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಬಿ.ವಿ. ತುಳಸಿ ಅವರು ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಕಾಲೇಜು ಜೀವನದ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಹಾಡು ಹೇಳಿ ರಂಜಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಮಣ್ಣ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು. ಜೊತೆಗೆ, ಬದಲಾಗುತ್ತಿರುವ ಸ್ತ್ರೀ- ಪುರುಷ ಸಮಾನತೆಯ ಸಂಬಂಧಗಳ ಉದಾಹರಣೆಗಳನ್ನು ತಿಳಿಸಿಕೊಟ್ಟರು.

ಇಂಗ್ಲಿಷ್ ವಿಭಾಗದ ಡಾ. ಅನುಪಮಾ ಢವಳೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳಾ ಸ್ವಾತಂತ್ರ್ಯ ಹೊಸ ರೂಪು ಪಡೆದಿರುವ ಬಗೆ ಹಾಗೂ ಇದಕ್ಕೆ ಪುರುಷರು ಒತ್ತಾಸೆಯಾಗುತ್ತಿರುವುದನ್ನು ಉದಾಹರಣೆ ಸಹಿತ ತಿಳಿಸಿಕೊಟ್ಟರು.

ಕಾಲೇಜಿನ ಅಧ್ಯಾಪಕೇತರ ಗುತ್ತಿಗೆ ಆಧಾರಿತ ಮಹಿಳಾ ಸಿಬ್ಬಂದಿ ಮತ್ತು ಸ್ವಚ್ಚತಾ ಕೆಲಸಗಾರರನ್ನು ಗುರುತಿಸಿ ಗೌರವಿಸಿತು.

ಕಾಲೇಜಿನ ಸಹ ಪ್ರಾಧ್ಯಾಪಕಿ ಪ್ರೊ. ಧನಲಕ್ಷ್ಮಿ ಇದ್ದರು. ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಕೆ. ಜಯಶ್ರೀ ಸ್ವಾಗತಿಸಿದರು.

ಕಾಲೇಜಿನ ವಿದ್ಯಾರ್ಥಿನಿಯರು ಭಾರತದ ವಿವಿಧ ರಾಜ್ಯಗಳ ವೇಷ ಭೂಷಣ ತೊಟ್ಟು ಭಾರತೀಯ ಮಹಿಳೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸಿದರು.