ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಪ್ರತಿ ಬಾರಿ ಮಳೆ ಕೊರತೆ ಕಾಡಿದಾಗ, ಭೀಕರ ಬರಗಾಲ ಎದುರಾದಾಗ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಭೀಮಾ ನದಿ ತೀರದ ಲಕ್ಷಾಂತರ ರೈತರು 2 ಕಾರಣಕ್ಕಾಗಿ ಕಂಗಾಲಾಗುತ್ತಾರೆ.
ತಾವು ಲಕ್ಷಾಂತರ ಹಣ ಹೂಡಿ ಮಾಡುತ್ತಿರೋ ಬೇಸಾಯದ ಫಸಲು ಕಣ್ಣ ಮುಂದೆಯೇ ನೀರಿನ ಅಭಾವದಿಂದ ಹಾಳಾಗಿ ರೈತರು ಕಂಗಾಲಾಗುತ್ತಾರೆ. ಇನ್ನು ಊರ ಮುಂದೆಯೇ ನದಿ ಇದ್ದರೂ ಕೂಡಾ ತಮಗೆ, ತಮ್ಮ ಜಾನುವಾರುಗಳು ಹನಿ ನೀರಿಗೂ ತತ್ವಾರ ಪಡೋದನ್ನು ಕಂಡು ಮರಗುತ್ತಾರೆ.ಪ್ರಸಕ್ತ ವರ್ಷ ಮಳೆ ಕೊರತೆಯ ಜೊತೆಗೇ ಭೀಮಾ ನದ ಉಗಮ ಸ್ಥಾನ ಮಹಾರಾಷ್ಟ್ರದಿಂದಲೂ ಹೆಚ್ಚುವರಿ ನೀರು ನದಿಗೆ ಹರಿದು ಬರಲೇ ಇಲ್ಲ. ಹೀಗಾಗಿ ಭೀಮಾ ನದಿ ತೀರದಲ್ಲಿರುವ ಕರ್ನಾಟಕದ ಕಲಬುರಗಿ, ವಿಜಯಪೂರ, ಯಾದಗಿರಿ ಜಿಲ್ಲೆಗಳಲ್ಲಿನ ರೈತರ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಮತ್ತೊಂದೆಡೆ, ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ತತ್ವಾರ ಉಂಟಾಗಿದೆ.
ನ್ಯಾಯಮೂರ್ತಿ ಬಚಾವತ್ ಅಧ್ಯಕ್ಷತೆಯ ಕೃಷ್ಣಾ ಜಲವಿವಾದ ನ್ಯಾಯಾಧೀಕರಣ ಪೀಠದ ಭೀಮಾ ನದಿಯ ನೀರು ಹಂಚಿಕೆಯ ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯವು ಅಕ್ರಮ ಬ್ಯಾರೇಜ್‌ಗಳು ಮತ್ತು ನೀರಾವರಿ ಯೋಜನೆಗಳನ್ನು ಮಾಡಿಕೊಂಡು ಅಧಿಕ ನೀರು ಬಳಸಿಕೊಳ್ಳುತ್ತಿರುವ ಪರಿಣಾಮ ಭೀಮಾ ನದಿ ಬತ್ತಿ ಹೋಗುತ್ತಿದೆ.1976ರಲ್ಲಿ ಬಚಾವತ್ ಆಯೋಗವು (ಭೀಮಾ, ಕೃಷ್ಣಾ ನದಿಯ ಉಪನದಿ. ಹೀಗಾಗಿ ಭೀಮಾ ನೀರು ಹಂಚಿಕೆಯೂ ಇದರಲ್ಲೇ ಬರುತ್ತದೆ) ನೀಡಿದ ತೀರ್ಪಿನಂತೆ ಭೀಮಾ ನದಿಯ ಒಟ್ಟು 351 ಟಿಎಂಸಿ ನೀರಿನಲ್ಲಿ ಮಹಾರಾಷ್ಟ್ರ 300.6., ಕರ್ನಾಟಕ 45.3 ಮತ್ತು ಆಂಧ್ರಪ್ರದೇಶ 5.1 ಟಿಎಂಸಿ ನೀರಿನ ಪಾಲು ಹೊಂದಿವೆ.
ಈ ಪೈಕಿ ಮಹಾರಾಷ್ಟ್ರಕ್ಕೆ 95 ಟಿಎಂಸಿ, ಕರ್ನಾಟಕಕ್ಕೆ 15 ಟಿಎಂಸಿ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಅದರಂತೆ ಆರಂಭದ ಕೆಲವು ವರ್ಷ ಮಹಾರಾಷ್ಟ್ರದ ಉಜನಿ ಅಣೆಕಟ್ಟೆಯಿಂದ ನೀರು ಹರಿಸಲಾಗುತ್ತಿತ್ತು. 1985ರವರೆಗೆ 9.30 ಟಿಎಂಸಿ ನೀರು ಬಿಡುತ್ತಿದ್ದ ಮಹಾರಾಷ್ಟ್ರ 1986ರಿಂದ 1998ರವರೆಗೆ 1.70 ಟಿಎಂಸಿ ನೀರು ಹರಿಸಿತ್ತು. ನಂತರ ಅದೂ ನಿಂತು ಹೋಗಿದೆ.ಕೇಂದ್ರ ಜಲಸಂಪನ್ಮೂಲ ಮಂಡಳಿಯ ಅನುಮತಿಯನ್ನು ಪಡೆಯದೆ ಉಜನಿ ಅಣೆಕಟ್ಟಿನ ಹಿನ್ನೀರಿನಲ್ಲಿ ಅಕ್ರಮವಾಗಿ ಸುಮಾರು 25 ಕಿ.ಮೀ ಉದ್ದದ ಸುರಂಗ ಮಾರ್ಗ ಕೊರೆದು ಸೀನಾ ನದಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ 13.5 ಟಿಎಂಸಿ ನೀರು ಸೀನಾ ನದಿಗೆ ಸೇರ್ಪಡೆ ಆಗುತ್ತಿದೆ. ಉಜನಿ ಅಣೆಕಟ್ಟು 117.2 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದ್ದು, ಅದರಲ್ಲಿ 60.5 ಟಿಎಂಸಿ ನೀರು ಡೆಡ್ ಸ್ಟೋರೇಜ್‌ನಲ್ಲಿದ್ದರೆ, 56.7 ಟಿಎಂಸಿ ನೀರು ಲೈವ್ ಸ್ಟೋರೇಜ್ನರಲ್ಲಿದೆ. ಜಗತ್ತಿನ ಯಾವ ಅಣೆಕಟ್ಟೆಯಲ್ಲಿಯೂ ಸಹ 60.5 ಟಿಎಂಸಿ ನೀರು ಡೆಡ್ ಸ್ಟೋರೇಜ್ನಎಲ್ಲಿ ಇಲ್ಲವೆಂದು ಹೇಳಲಾಗುತ್ತದೆ. 3 ಮೀಟರ್ ಎತ್ತರಿಸಿ 7 ಟಿಎಂಸಿ ನೀರನ್ನು ಅಧಿಕವಾಗಿ ಸಂಗ್ರಹಿಸಲು ಆರಂಭಿಸಿ ಈಗಾಗಲೇ 6-7 ವರ್ಷಗಳಾಗಿವೆ.
ತೀರ್ಪಿನ ಬಳಿಕ ಕೆಲವೇ ವರ್ಷ ನೀರು ಹರಿಸಿದ್ದು ಬಿಟ್ಟರೆ ಈಚೆಗೆ ಒಮ್ಮೆಯೂ 15 ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರ ಹರಿಸಿಲ್ಲ. ಸೋಲಾಪುರ ರಸ್ತೆಯಲ್ಲಿರುವ ಟಾಕಳಿ ನೀರು ಮಾಪನ ಕೇಂದ್ರದಲ್ಲಿ ನಮ್ಮ ರಾಜ್ಯದ ವ್ಯಾಪ್ತಿಯ ಭೀಮಾ ನದಿಗೆ ಬಂದ ನೀರಿನ ಪ್ರಮಾಣ ದಾಖಲಾಗುತ್ತದೆ. ಆದರೆ ಈ ವರ್ಷ ಮಹಾರಾಷ್ಟ್ರದಿಂದ ನಮಗೆ ನೀರು ಹರಿದು ಬಂದ ಬಗ್ಗೆ ಅಲ್ಲಿ ಯಾವುದೇ ದಾಖಲೆ ಇಲ್ಲ.ಉಜನಿ ಜಲಾಶಯದ ಸದ್ಯದ ಸಂಗ್ರಹಣಾ ಸಾಮರ್ಥ್ಯ 117.2 ಟಿಎಂಸಿ ಅಡಿ (ಲೈವ್ ಸ್ಟೋರೇಜ್ 56.7 ಟಿಎಂಸಿ, ಡೆಡ್ ಸ್ಟೋರೇಜ್ 60.5). ಡೆಡ್ ಸ್ಟೋರೇಜ್‌ನಲ್ಲಿನ ನೀರನ್ನು ಹರಿಸಲು ಬರುವುದಿಲ್ಲ. ಆದರೆ, ಉಜನಿಯ ಲೈವ್ ಸ್ಟೋರೇಜ್ ಲೆಕ್ಕವನ್ನು ಮಾತ್ರ ತೋರಿಸಿ ನಮ್ಮ ಹಕ್ಕಿನ ನೀರನ್ನು ಮಹಾರಾಷ್ಟ್ರ ಅಕ್ರಮವಾಗಿ ಬಳಸಿಕೊಳ್ಳುತ್ತಿದೆ.
ಕಾವೇರಿ ನದಿಯಂತೆ ಭೀಮಾ ನದಿಗೂ ನಮ್ಮನ್ನಾಳುವ ಸರ್ಕಾರ ಮಹತ್ವ ನೀಡಲು ಇದು ಸಕಾಲ. ಮುತುವರ್ಜಿ ವಹಿಸಿ ಮಹಾರಾಷ್ಟ್ರದಿಂದ ಪ್ರತಿ ವರ್ಷ ಬರಬೇಕಾಗಿರುವ ಕರ್ನಾಟಕದ ಪಾಲಿನ ನೀರನ್ನು ಪಡೆಯಲು ಸರ್ಕಾರದ ಹಂತದಲ್ಲಿ ಯತ್ನಿಸಬೇಕಾಗಿದೆ.ಕರ್ನಾಟಕದಲ್ಲಿ ಭೀಮಾ ನದಿ ಉದ್ದ; 287 ಕಿ.ಮೀ
ಭೀಮಾ ಅವಲಂಬಿತ ಜಿಲ್ಲೆಗಳು; ವಿಜಯಪುರ, ಕಲಬುರಗಿ, ಯಾದಗಿರಿಭೀಮಾ ವ್ಯಾಪ್ತಿಯ ತಾಲ್ಲೂಕುಗಳು (10); ಚಡಚಣ, ಇಂಡಿ, ಸಿಂದಗಿ, ಅಫಜಲಪುರ, ಕಲಬುರಗಿ, ಜೇವರ್ಗಿ, ಚಿತ್ತಾಪುರ, ಶಹಾಪುರ, ಯಾದಗಿರಿ, ವಡಗೇರಾ
ಭೀಮಾ ನದಿ ವ್ಯಾಪ್ತಿಯ ಗ್ರಾಮಗಳು; 165ಬರಗಾಲದ ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಿ ಕಲಬುರಗಿ 38ನೇ ಸ್ಥಾನ: ತೊಗರಿಯ ಕಣಜ ಕಲಬುರಗಿ ಜಿಲ್ಲೆಗೆ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಬರದ ಛಾಯೆ ಆವರಿಸಿಕೊಳ್ಳುವುದು ಸಾಮಾನ್ಯ ವಾಡಿಕೆ. ಬರಪೀಡಿತ ಹಣೆಪಟ್ಟಿ ಅಂಟಿಸಿಕೊಂಡ ಜಿಲ್ಲೆಯ ರೈತರ ಬದುಕು ಸಂಕಷ್ಟದ ಸುಳಿಯಲ್ಲಿ ಸಿಲುಕುತ್ತದೆ. ಸಂಕಷ್ಟದಿಂದ ಪಾರು ಮಾಡುವು ಏಕೈಕ ಆಶಾಕಿರಣ ಭೀಮಾ ನದಿ.
ಜಿಲ್ಲೆಯಲ್ಲಿ ವಾರ್ಷಿಕ ಸುಮಾರು 842 ಮಿ.ಮೀ ಮಳೆಯಾಗುತ್ತದೆ. 3.95 ಲಕ್ಷ (ಶೇ 89.85ರಷ್ಟು) ರೈತರು ಮಳೆಯನ್ನೇ ನಂಬಿಕೊಂಡು 9.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುತ್ತಾರೆ. ಆದರೆ, ಮಾನ್ಸೂನ್ ಮಾರುತಗಳ ಸತತ ವೈಫಲ್ಯವು ರೈತರನ್ನು ಕಂಗಾಲಾಗಿಸಿದೆ. ಭಾರತೀಯ ಹವಾಮಾನ ಇಲಾಖೆಯ ಮೌಸಂ ಜರ್ನಲ್‌ನ 2011ರ ಜುಲೈ ಸಂಚಿಕೆಯ ವರದಿಯಲ್ಲಿ 1961ರಿಂದ 2008ರ ನಡುವೆ ಬಿದ್ದ ಮಳೆಯನ್ನು ಪರಿಶೀಲಿಸಿತ್ತು. ಪ್ರತಿ ಐದು ವರ್ಷಗಳಲ್ಲಿ ಮಳೆಯ ಏರಿಳಿತ ಆಗಿರುವುದಾಗಿ ಹೇಳಿತ್ತು. 2 ವರ್ಷ ಸತತ ಬರಗಾಲ ಬಿದ್ದರೆ ಮುಂದಿನ ನಾಲ್ಕೈದು ವರ್ಷಗಳು ವಿಪರೀತವಾಗಿ ಮಳೆಯಾಗುವುದು ಜಿಲ್ಲೆಯಲ್ಲಿ ಸಾಮಾನ್ಯ. ಜಿಲ್ಲೆಯಲ್ಲಿ 100 ಟಿಎಂಸಿ ಅಡಿ ನೀರು ನಿಲ್ಲಿಸುವಂತಹ ದೊಡ್ಡ ನದಿಗಳು ಇಲ್ಲ. ಕಡಿಮೆ ನೀರು ಬೇಡುವ ತೊಗರಿಯಂತಹ ಬೆಳೆಗಳೇ ಬೆಳೆದರು ರೈತರಿಗೆ ಸಂಕಷ್ಟ ತಪ್ಪುತ್ತಿಲ್ಲ.--------
ಮಳೆ ಪ್ರಮಾಣದಲ್ಲಿ ಸತತ ಇಳಿಕೆ- ಆತಂಕ1966ರಿಂದ 1976ರ ನಡುವೆ ಮಳೆಯ ಪ್ರಮಾಣ ಇಳಿಕೆಯಾಗಿತ್ತು. 1972ರಲ್ಲಿ ಅತ್ಯಂತ ಕನಿಷ್ಠ 220 ಮಿ.ಮೀ ಮಳೆಯಾಗಿ ಭೀಕರ ಬರಗಾಲ ಸಂಭವಿಸಿತ್ತು. 1977ರಿಂದ 1993ರವರೆಗೆ ಮಳೆ ಹೆಚ್ಚಳ ಕಂಡಿದ್ದರೆ 1994ರಿಂದ 1998ರವರೆಗೆ ಇಳಿಕೆಯಾಗಿತ್ತು. 1999ರಲ್ಲಿ ಸ್ವಲ್ಪ ಮಳೆ ಹೆಚ್ಚಾಗಿದ್ದರೂ 2002ರಿಂದ 2008ರವರೆಗೆ ಮಳೆಯ ಕುಸಿತ ಮುಂದುವರಿದಿತ್ತು. ಕೃಷಿ ಇಲಾಖೆ ಪ್ರಕಾರ, 2013ರಲ್ಲಿ ಹೆಚ್ಚಳವಾದ ಮಳೆಯು 2015ರಲ್ಲಿ ಕುಸಿತವಾಗಿತ್ತು. 2018 ಮತ್ತು 2019ರಲ್ಲಿ ಕ್ರಮವಾಗಿ ಶೇ 39 ಹಾಗೂ 20ರಷ್ಟು ಕುಸಿತ ಕಂಡಿತ್ತು. 2020ರಲ್ಲಿ ಶೇ 39ರಷ್ಟು ಏರಿಕೆಯಾಗಿ 2022ರವರೆಗೆ ಉತ್ತಮ ಮಳೆಯಾಗಿತ್ತು. ಆದರೆ, 2023ಕ್ಕೆ ಮಳೆಯ ಪ್ರಮಾಣ ಕುಸಿದು ಬರ ಆವರಿಸಿದೆ.
ಭೀಮಾ ತೀರದ ಜಿಲ್ಲೆಗಳಲ್ಲಿ ಬರ ನಿರ್ವಹಣೆ ಬಲು ಮುಖ್ಯ: ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯಲ್ಲಿಯೂ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಬರಗಾಲ ಸಂಭವಿಸುವುದು ಸಾಮಾನ್ಯ. ಹೀಗಾಗಿ, ಕಲಬುರಗಿಯಂತಹ ಜಿಲ್ಲೆಗೆ ಬರ ನಿರ್ವಹಣೆ ಬಹಳ ಮುಖ್ಯ ಎಂದು ಸೂಚಿಸಿದೆ.ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್ಮೆಂಟ್ ಆಂಡ್ ವಾಟರ್‌ನ (ಸಿಇಇಡಬ್ಲ್ಯು) ‘ಭಾರತದ ಹವಾಮಾನ ದುರ್ಬಲತೆ ನಕ್ಷೆ’ ಅಧ್ಯಯನದ ಅನ್ವಯ, ದೇಶದ ಅಗ್ರ 20 ಬರಪೀಡಿತ ಜಿಲ್ಲೆಗಳ ಪೈಕಿ ಕಲಬುರಗಿ ಜಿಲ್ಲೆಯು 0.7 ಸೂಚ್ಯಂಕದೊಂದಿಗೆ 18ನೇ ಸ್ಥಾನ ಪಡೆದಿದೆ. ಭಾರತದ 272 ಬರಗಾಲದ ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಿ ಕಲಬುರಗಿ 38ನೇ ಸ್ಥಾನ ಪಡೆದಿದ್ದು, ರಾಜ್ಯದಲ್ಲಿ ಅಗ್ರ ಸ್ಥಾನ ಲಭಿಸಿದೆ. ಇದು ಜಿಲ್ಲೆಯಲ್ಲಿನ ಹವಾಮಾನ ವೈಪರೀತ್ಯಕ್ಕೆ ಕನ್ನಡಿ ಹಿಡಿದಿದೆ.