ಸಾರಾಂಶ
ಅ. 7ರಂದು ನಡೆಸಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ಪೂರ್ವಭಾವಿ ಸಭೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕು ಕಚೇರಿ ಸಭಾಂಗಣದಲ್ಲಿ ಅ.7ರಂದು ನಡೆಸಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ಪೂರ್ವಭಾವಿ ಸಭೆ ತಹಸೀಲ್ದಾರ್ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಪರಿಶಿಷ್ಟ ಪಂಗಡದ ಹಲವಾರು ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರಿದ್ದು, ಯಾರಿಗೂ ಸಭೆಯ ಮಾಹಿತಿ ನೀಡದ ಬಗ್ಗೆ ಸಮಾಜದ ಮುಖಂಡ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲ ಧರ್ಮದವರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಮಾಡಬೇಕು ಎಂದು ಅವರು ತಿಳಿಸಿದರು.ದಲಿತ ಮುಖಂಡ ನಿರ್ವಾಣಪ್ಪ ಮಾತನಾಡಿ, ಯಾವುದೇ ಒಂದು ಜನಾಂಗದ ನಾಯಕರ ಕಾರ್ಯಕ್ರಮಗಳನ್ನು ಕೇವಲ ಒಂದು ಸಮಾಜದವರು ಮಾತ್ರ ಆಚರಿಸುತ್ತಿದ್ದಾರೆ. ಯಾರೋಬ್ಬ ಸಾಧಕರು ಒಂದು ಜಾತಿ ಧರ್ಮಕ್ಕೆ ಮಾತ್ರ ಸೀಮಿತವಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದಲ್ಲಿ ಮಾತ್ರ ಮಹನಿಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು. ತೋಳೂರು ಶೆಟ್ಟಳ್ಳಿಯ ಸುರೇಶ್ ಮಾತನಾಡಿ, ಸರ್ಕಾರ ಹಲವು ಮಹನೀಯರ ಆಚರಣೆಗಳನ್ನು ಸರ್ಕಾರಿ, ಸಿಬಂದಿ ಹಾಗೂ ಸಾರ್ವಜನಿಕರು ಸೇರಿ ಆಚರಿಸಲು ವ್ಯವಸ್ಥೆ ಮಾಡಿದೆ. ಆದರೆ, ಯಾವುದೇ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸರ್ಕಾರಿ ಸಿಬ್ಬಂದಿ ಕಾಣಲು ಸಿಗುವುದಿಲ್ಲ. ಅಂದು ಪೂರ್ತಿ ರಜೆಯನ್ನು ತಮ್ಮ ಸ್ವಂತ ಕೆಲಸದಲ್ಲಿ ಕಳೆಯುತ್ತಾರೆ. ಮುಂದಿನ ದಿನಗಳಲ್ಲಿ ಈ ರೀತಿ ಯಾವುದೇ ಅಚರಣೆಗಳನ್ನು ಆಚರಿಸುವುದು ಬೇಡ ಎಂದು ಸಭೆಯ ಗಮನಕ್ಕೆ ತಂದರು.ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಹಿಂದಿನ ಸಾಲಿನಲ್ಲಿ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಒಟ್ಟಾಗಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಭಾರಿ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿಯೇ ಎಲ್ಲರೂ ಸೇರಿ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು. ಒಬ್ಬ ಮುಖ್ಯ ಭಾಷಣಕಾರರಿಂದ ಭಾಷಣ, ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವಂತೆ ಸಭೆಗೆ ತಿಳಿಸಿದರು. ಸಭೆಯಲ್ಲಿ ಕೆಡಿಪಿ ಸದಸ್ಯ ವೇದಕುಮಾರ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ದಿವಿಲ್‌ಕುಮಾರ್, ದಲಿತ ಮುಖಂಡ ಜಯಪ್ಪ ಹಾನಗಲ್ಲು, ಹೊನ್ನಪ್ಪ, ಚಿಕ್ಕ ಅಳುವಾರ ಸ್ನಾತಕೋತ್ತರ ಕಾಲೇಜಿನ ಪ್ರೊಫೇಸರ್ ಡಾ. ಧರ್ಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧೇಗೌಡ, ಜಿಲ್ಲಾ ಪಂಚಾಯಿತಿ ಎಇಇ ನಾರಾಯಣಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.